ನೆಲ್ಲೂರು(ಆಂಧ್ರ ಪ್ರದೇಶ): ರಾಜ್ಯದ ನೆಲ್ಲೂರಿನ ಬಾಲಕನೋರ್ವ ರೂಬಿಕ್ಸ್ ಕ್ಯೂಬ್ ಅನ್ನು ಸರಿಯಾಗಿ ಜೋಡಿಸುವ ಮೂಲಕ ಗಿನ್ನಿಸ್ ವಿಶ್ವದಾಖಲೆಯ ಪುಟ ಸೇರ್ಪಡೆಯಾಗಿದ್ದಾನೆ. ಶ್ರೀನಿವಾಸ್ ಮತ್ತು ಸ್ವಪ್ನಾ ದಂಪತಿಯ ಹಿರಿಯ ಮಗ ನಯನ್ ಮೌರ್ಯ, ಸೈಕಲ್ ಚಲಾಯಿಸುತ್ತಲೇ 271 ರೂಬಿಕ್ಸ್ ಕ್ಯೂಬ್ ಬಗೆಹರಿಸಿದ್ದು ವಿಶೇಷ.
ನಯನ್ ಮೌರ್ಯ ಪೋಷಕರೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದ. 2020ರಲ್ಲಿ ಭಾರತಕ್ಕೆ ವಾಪಸಾದ ಕುಟುಂಬ ನೆಲ್ಲೂರಿನಲ್ಲಿ ಗಾರ್ಮೆಂಟ್ಸ್ ವ್ಯಾಪಾರ ಆರಂಭಿಸಿತ್ತು. ಮೌರ್ಯ ಅಮೆರಿಕದಲ್ಲಿದ್ದಾಗ ಶಾಲೆಯಲ್ಲೊಮ್ಮೆ ತನ್ನ ಸ್ನೇಹಿತರು ರೂಬಿಕ್ಸ್ ಕ್ಯೂಬ್ ಸಾಲ್ವ್ ಮಾಡುತ್ತಿರುವುದನ್ನು ನೋಡಿ ಅದರ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದಾನೆ. ಮಗನ ಆಸಕ್ತಿ ಗಮನಿಸಿದ ಪೋಷಕರು ಆತನ ಹುಟ್ಟುಹಬ್ಬದಂದು ರೂಬಿಕ್ಸ್ ಕ್ಯೂಬ್ ಅನ್ನೇ ಉಡುಗೊರೆ ನೀಡಿದ್ದರು.
ಅಮೆರಿಕದಿಂದ ಭಾರತಕ್ಕೆ ಬಂದ ಬಳಿಕ ನಯನ್ಗೆ ರೂಬಿಕ್ಸ್ ಕ್ಯೂಬ್ ಮೇಲಿನ ಆಸಕ್ತಿ ಮತ್ತಷ್ಟು ಹೆಚ್ಚಾಗಿತ್ತು. ಮಗನ ಪ್ರತಿಭೆ ಗುರುತಿಸಿದ ತಾಯಿ 20 ಬಗೆಯ ರೂಬಿಕ್ಸ್ ಕ್ಯೂಬ್‌ಗಳನ್ನು ಖರೀದಿಸಿ ಕೊಟ್ಟಿದ್ದರು. ಇದರಲ್ಲಿಯೇ ಸಂಪೂರ್ಣವಾಗಿ ತೊಡಗಿಕೊಂಡು ಆಟದ ತಂತ್ರಗಳನ್ನು ಕಲಿತಿದ್ದಾನೆ. ಅಲ್ಲದೇ ಟೈಮರ್ ಇಟ್ಟು ಪಜಲ್ ಸಾಲ್ವ್ ಮಾಡಲು ಆರಂಭಿಸಿದ್ದಾನೆ. ಇದರೊಂದಿಗೆ ಹಲವೆಡೆ ನಡೆದ ಸ್ಪರ್ಧೆಗಳಲ್ಲೂ ಪಾಲ್ಗೊಂಡು ಸಾಕಷ್ಟು ಪಶಸ್ತಿಗಳನ್ನು ಬಾಚಿಕೊಂಡಿದ್ದಾನೆ.
ನಯನ್ ಕ್ಯೂಬರ್ಸ್ ಅಸೋಸಿಯೇಷನ್ ಸದಸ್ಯ ಕೂಡ ಹೌದು. ಅಲ್ಲಿಯೂ ಹೊಸ ತಂತ್ರಗಳನ್ನು ಕಲಿತಿದ್ದಾನೆ. ಬಳಿಕ ಗಿನ್ನಿಸ್ ದಾಖಲೆ ಬಗ್ಗೆ ತಿಳಿದುಕೊಂಡು ಇದೀಗ ಸೈಕಲ್ ತುಳಿಯುತ್ತಲೇ ಕ್ಯೂಬ್ ಸಾಲ್ವ್ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಚೆನ್ನೈನಲ್ಲಿ ನಡೆದ ಗಿನ್ನಿಸ್ ದಾಖಲೆ ಸ್ಪರ್ಧೆಯಲ್ಲಿ ಭಾಗವಹಿಸಿ ಕಡಿಮೆ ಸಮಯದಲ್ಲಿ ಪಜಲ್ ಸಾಲ್ವ್ ಮಾಡಿದ್ದಾನೆ. ಅದೂ ಕೂಡ ಸೈಕಲ್ ಓಡಿಸುತ್ತಲೇ ಎಂಬುದು ಅತ್ಯಂತ ಕುತೂಹಲದ ಸಂಗತಿ. ಇದರೊಂದಿಗೆ ಗಿನ್ನಿಸ್ ಪುಟದಲ್ಲಿ ತಮ್ಮ ಹೆಸರು ಸೇರಿಸಿದ್ದಾನೆ.
ರೂಬಿಕ್ಸ್ ಕ್ಯೂಬ್ ಸಾಲ್ವ್ ಮಾಡುವುದರ ಜೊತೆಗೆ ನಯನ್, ರಾಜ್ಯ ಮಟ್ಟದ ಫುಟ್‌ಬಾಲ್ ಆಟಗಾರ ಕೂಡಾ. ಇದರಲ್ಲೂ ಅನೇಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದಿದ್ದಾನೆ. ಅಧ್ಯಯನದಲ್ಲೂ ಮುಂದಿದ್ದಾನೆ. ರೊಬೊಟಿಕ್ ವಿಷಯದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಮುಂದುವರಿಸುವುದಾಗಿ ಹೇಳಿದ್ದಾನೆ.