ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1994ರ ಮಾರ್ಚ್ 13 ರಂದು ಹೈದರಾಬಾದ್‌ನಲ್ಲಿ ಜನಿಸಿದ ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದಲ್ಲಿ 'ಮಿಯಾನ್ ಭಾಯ್' ಎಂದೇ ಖ್ಯಾತರಾಗಿದ್ದಾರೆ. ಕ್ರಿಕೆಟ್‌ನಲ್ಲಿ ಸಾಕಷ್ಟು ಹೆಸರು ಗಳಿಸಿರುವ ಸಿರಾಜ್ ಜನ್ಮದಿನದಂದು ಅಭಿನಂದನೆ ಸಲ್ಲಿಸಿರುವ ಬಿಸಿಸಿಐ, ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಸಿರಾಜ್ ತಮ್ಮ ಹೋರಾಟದ ಜೀವನದ ಬಗ್ಗೆ ಮಾತನಾಡಿದ್ದಾರೆ.
ಕಳೆದ ಒಂದು ವರ್ಷದಿಂದ ಕ್ರಿಕೆಟ್‌ಗಾಗಿ ತನ್ನನ್ನು ಮುಡಿಪಾಗಿಡುತ್ತಿದ್ದೇನೆ, ಒಂದು ವೇಳೆ ನನಗೆ ಯಶಸ್ಸು ಸಿಗದಿದ್ದರೆ ಕ್ರಿಕೆಟ್ ತ್ಯಜಿಸಬೇಕೆಂದು ಒಮ್ಮೆ ಯೋಚಿಸಿದ್ದೆ ಎಂದು ಸಿರಾಜ್ ಹೇಳಿಕೊಂಡಿದ್ದಾರೆ. ಆ ಬಳಿಕ ಸಿರಾಜ್ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಬದುಕಿನ ಹೋರಾಟದ ಬಗ್ಗೆಯೂ ಮಾತನಾಡಿರುವ ಸಿರಾಜ್, ಆ ಹೋರಾಟದ ಬದುಕನ್ನು ಕಾಣದೇ ಇದ್ದಿದ್ದರೆ ಇಂದು ಯಶಸ್ಸನ್ನು ಅನುಭವಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಬಿಸಿಸಿಐ ವಿಡಿಯೋದಲ್ಲಿ ಅನಿಸಿಕೆ ಹಂಚುಕೊಂಡಿದ್ದಾರೆ.
ತಮ್ಮ ಬಾಲ್ಯದ ಆಟದ ಮೈದಾನವಾದ ಈದ್ಗಾ ಜೊತೆಗಿನ ನಂಟಿನ ಬಗ್ಗೆಯೂ ಸಿರಾಜ್ ತಿಳಿಸಿದ್ದಾರೆ. ನಾನು ಹೈದರಾಬಾದ್‌ಗೆ ಬಂದಾಗಲೆಲ್ಲಾ ಮನೆಗೆ ಹೋದ ಬಳಿಕ ಮೊದಲು ಹೋಗುವುದು ಬಾಲ್ಯದಲ್ಲಿ ನಾನು ಕ್ರಿಕೆಟ್ ಆಡಿದ್ದ ಸ್ಥಳಕ್ಕೆ ಎಂದು ಅವರು ಹೇಳಿದ್ದಾರೆ. ನಾನು ಕೇಟರಿಂಗ್ ಕೆಲಸಕ್ಕೆ ಹೋಗುತ್ತಿದ್ದೆ, ಓದುವಂತೆ ನನ್ನ ಕುಟುಂಬ ಸದಸ್ಯರು ಹೇಳುತ್ತಿದ್ದರು. ಆ ಸಂದರ್ಭದಲ್ಲಿ 100-200 ರೂ. ಸಿಕ್ಕರೂ ಬಹಳ ಖುಷಿಯಾಗುತ್ತಿತ್ತು. 150 ರೂ. ಮನೆಗೆ ಕೊಟ್ಟು 50 ರೂಪಾಯಿಯನ್ನು ನನ್ನ ಸ್ವಂತ ಖರ್ಚಿಗೆ ಇಟ್ಟುಕೊಳ್ಳುತ್ತಿದ್ದೆ. ತಂದೆಯ ಬಳಿ ಒಂದು ಆಟೋ ಇದ್ದು, ಅದನ್ನು ತಳ್ಳಿಕೊಂಡು ಹೋದರೆ ಮಾತ್ರ ಸ್ಟಾರ್ಟ್ ಆಗುತ್ತಿತ್ತು ಎಂದು ಸಿರಾಜ್ ಹೇಳಿಕೊಂಡಿದ್ದಾರೆ.