ಕರ್ನಾಟಕ

karnataka

ETV Bharat / sports

ರೋಚಕ ಪಂದ್ಯಕ್ಕೆ ಸಾಕ್ಷಿಯಾದ ತಾರಾಗಣ: ಆರ್​ಸಿಬಿ ತಂಡಕ್ಕೆ ಚಿಯರ್​​ ಮಾಡಿದ ಮಹಿಳಾ ಚಾಂಪಿಯನ್ನರು - stars cheers for rcb

ಸಿಎಸ್​ಕೆ ವಿರುದ್ಧ ನಡೆದ ಹಣಾಹಣಿಯಲ್ಲಿ ರೋಚಕ ಗೆಲುವು ಸಾಧಿಸಿ ಪ್ಲೇಆಫ್​ನಲ್ಲಿ ಸ್ಥಾನ ಪಡೆದ ಆರ್​ಸಿಬಿಯನ್ನು ಚಿಯರ್​ ಮಾಡಲು ಕ್ರೀಡಾಂಗಣದಲ್ಲಿ ತಾರಾಗಣವೇ ನೆರೆದಿತ್ತು.

ರೋಚಕ ಪಂದ್ಯಕ್ಕೆ ಸಾಕ್ಷಿಯಾದ ತಾರಾಗಣ
ರೋಚಕ ಪಂದ್ಯಕ್ಕೆ ಸಾಕ್ಷಿಯಾದ ತಾರಾಗಣ (Instagram)

By ETV Bharat Karnataka Team

Published : May 19, 2024, 5:52 PM IST

ಹೈದರಾಬಾದ್:ಐಪಿಎಲ್​ ಇತಿಹಾಸದಲ್ಲಿ ರೋಚಕ ಪಂದ್ಯವೊಂದಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಸಾಕ್ಷಿಯಾದವು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವಿನ ಸಾಂಪ್ರದಾಯಿಕ ಹೋರಾಟದಲ್ಲಿ ಆರ್​ಸಿಬಿ ರೋಚಕ ಗೆಲುವು ಸಾಧಿಸಿ ಪ್ಲೇಆಫ್​ಗೆ ತಲುಪಿದರೆ, ಸೋತು ಸುಣ್ಣವಾದ ಸಿಎಸ್​ಕೆ ಮನೆಯ ಹಾದಿ ಹಿಡಿಯಿತು.

ಶನಿವಾರ ನಡೆದ ಮಹತ್ವದ ಪಂದ್ಯಕ್ಕೆ ಸಾವಿರಾರು ಕ್ರೀಡಾಭಿಮಾನಿಗಳ ಜೊತೆಗೆ ತಾರಾಗಣವೇ ಹಾಜರಿತ್ತು. ಆರ್​ಸಿಬಿ ತಂಡದ ಮಾಜಿ ಆಟಗಾರ, ಯೂನಿವರ್ಸಲ್​ ಬಾಸ್​ ಕ್ರಿಸ್​ಗೇಲ್​, ನಟ ರಿಷಬ್​ ಶೆಟ್ಟಿ, ಸಿಎಂ ಸಿದ್ದರಾಮಯ್ಯ, ಸಚಿವರು, ನಟಿ ಅನುಷ್ಕಾ ಶರ್ಮಾ, ಮಹಿಳಾ ಆರ್​ಸಿಬಿ ಆಟಗಾರ್ತಿಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ತಂಡವನ್ನು ಹುರಿದುಂಬಿಸಿದರು.

ಇದು ಇತಿಹಾಸ:ತಮ್ಮ ಸಾಂಪ್ರದಾಯಿಕ ದಿರಿಸಾದ ಕಪ್ಪು ಅಂಗಿ, ಬಿಳಿ ಪಂಚೆಯಲ್ಲಿ ಮಿಂಚಿದ ನಟ ರಿಷಬ್​ ಶೆಟ್ಟಿ, ತಮ್ಮ ನೆಚ್ಚಿನ ಕ್ರಿಕೆಟಿಗ ಕ್ರಿಸ್​ಗೇಲ್​ ಜೊತೆಗೆ ಕೆಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. "ಇದು ಇತಿಹಾಸ!! ಕ್ರೀಡಾಂಗಣದಲ್ಲಿ ಇದು ನನ್ನ ಮೊದಲ ಪಂದ್ಯ ವೀಕ್ಷಣೆ. ಆರ್​ಸಿಬಿ ತಂಡವನ್ನು ಅಂಕಪಟ್ಟಿಯ ಮೇಲ್ಭಾಗದಲ್ಲಿ ನೋಡ ಬಯಸುವೆ" ಎಂದು ಬರೆದುಕೊಂಡಿದ್ದಾರೆ.

ಇನ್ನೂ, ಯೂನಿವರ್ಸಲ್​ ಬಾಸ್​ ಕ್ರಿಸ್​ಗೇಲ್​​ ಆರ್​ಸಿಬಿ ಮಾಜಿ ಆಟಗಾರರಾಗಿದ್ದು, ಕ್ರೀಡಾಂಗಣದಲ್ಲಿ ತಂಡವನ್ನು ಚಿಯರ್​ ಮಾಡಿದರು. ಐಪಿಎಲ್​ನಲ್ಲಿ ಅವರು ಕೆಕೆಆರ್​ ಮತ್ತು ಪಂಜಾಬ್ ಕಿಂಗ್ಸ್​ ತಂಡದಲ್ಲಿ ಆಡಿದ್ದರೂ, ಅವರ ನೆಚ್ಚಿನ ತಂಡ ಆರ್​ಸಿಬಿ ಎಂಬುದನ್ನು ಹಲವು ಬಾರಿ ಸಾಬೀತು ಮಾಡಿದ್ದಾರೆ. ಪಂದ್ಯಕ್ಕೂ ಮುನ್ನ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಹಂಚಿಕೊಂಡಿದ್ದು, ಅವರ 333 ನಂಬರ್​ನ ಆರ್​ಸಿಬಿ ಜೆರ್ಸಿಯನ್ನು ತೋರಿಸಿದ್ದಾರೆ.

ಸಿಎಂ, ಸಚಿವರಿಂದ ಪಂದ್ಯ ವೀಕ್ಷಣೆ:ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಕೆಲ ಸಚಿವರು ಕೂಡ ಪಂದ್ಯವನ್ನು ವೀಕ್ಷಿಸಿದರು. ಮಳೆ ಆರಂಭಕ್ಕೂ ಮೊದಲು ಸಿದ್ದರಾಮಯ್ಯ ಅವರು ಕ್ರೀಡಾಂಗಣಕ್ಕೆ ಬಂದಿದ್ದರು. ಬಳಿಕ ರೋಚಕ ಪಂದ್ಯವನ್ನು ನೇರವಾಗಿ ವೀಕ್ಷಿಸಿದರು.

ಮಹಿಳಾ ಚಾಂಪಿಯನ್ನರಿಂದ ಚಿಯರ್​:ಕ್ರೀಡಾಂಗಣದಲ್ಲಿ ಅತಿ ಪ್ರಮುಖವಾಗಿ ಮಹಿಳಾ ಐಪಿಎಲ್​ ಚಾಂಪಿಯನ್​ ತಂಡದ ಆರ್​ಸಿಬಿ ಆಟಗಾರ್ತಿಯರ ಹಾಜರಿ ಗಮನ ಸೆಳೆಯಿತು. ಕರ್ನಾಟಕದ ಕುವರಿ ಶ್ರೇಯಾಂಕ್​ ಪಾಟೀಲ್​, ನಾಯಕಿ ಸ್ಮೃತಿ ಮಂದನಾ ಸೇರಿದಂತೆ ಹಲವು ಆಟಗಾರ್ತಿಯರು ಜೆರ್ಸಿಯಲ್ಲಿ ಮಿಂಚಿದರು.

ಮೇ 18 ರಂದು ಸೋಲೇ ಅರಿಯದ ಆರ್​ಸಿಬಿ:ಮೇ 18 ಆರ್​ಸಿಬಿ ತಂಡಕ್ಕೆ ಲಕ್ಕೀ ಡೇ ಎಂದೇ ಹೇಳಬಹುದು. ಶನಿವಾರದ ಪಂದ್ಯ ಸೇರಿದಂತೆ ಇಲ್ಲಿಯವರೆಗೆ ನಡೆದ ಐದೂ ಪಂದ್ಯಗಳಲ್ಲಿ ತಂಡ ಗೆಲುವು ಕಂಡಿದೆ. ಅದರಲ್ಲಿ ಚೆನ್ನೈ ವಿರುದ್ಧವೇ ಮೂರು ಬಾರಿ ಜಯ ಸಾಧಿಸಿದೆ. ಪಂದ್ಯದ ವೇಳೆ ಮಳೆ ಬಂದಾಗ ಅಲ್ಪ ವಿರಾಮವಿದ್ದಾಗ ಕೊಹ್ಲಿ ಮತ್ತು ಕ್ರಿಸ್ ಗೇಲ್ ಮಾತುಕತೆ ನಡೆಸಿದರು. ಪ್ಲೇಆಫ್​ಗೆ ತಲುಪುವ ಒತ್ತಡದ ನಡುವೆಯೂ ಇಬ್ಬರೂ ಲಘು ಚಟಾಕಿ ಹಾರಿಸಿ ನಗೆಗಡಲಲ್ಲಿ ತೇಲುತ್ತಿರುವುದು ಕಂಡುಬಂದಿತು.

ಇದನ್ನೂ ಓದಿ:ಭರ್ಜರಿ ಗೆಲುವು; ಸಿಎಸ್​ಕೆ ಮನೆಗೆ, ಆರ್​​ಸಿಬಿ ಪ್ಲೇಆಫ್‌ಗೆ - RCB BEAT CSK

ABOUT THE AUTHOR

...view details