ಪ್ಯಾರಿಸ್: ಶೂಟರ್ ಮನು ಭಾಕರ್ ಒಲಿಂಪಿಕ್ಸ್ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಬರೆದಿದ್ದಾರೆ. 20 ವರ್ಷಗಳ ಬಳಿಕ ಫೈನಲ್‌ಗೆ ಅರ್ಹತೆ ಪಡೆದ ಭಾರತದ ಮಹಿಳಾ ಶೂಟರ್ ಎನಿಸಿಕೊಂಡಿರುವ ಮನು ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪ್ರಸಕ್ತ ಒಲಿಂಪಿಕ್ನಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಇದಕ್ಕೂ ಮುನ್ನಾ 2004ರಲ್ಲಿ ಕೊನೆಯ ಬಾರಿಗೆ ಭಾರತೀಯ ಮಹಿಳಾ ಶೂಟರ್ ಸುಮಾ ಶಿರೂರ್ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದರು.
ಅತ್ಯುತ್ತಮ ಪ್ರದರ್ಶನ: ಮನು ಭಾಕರ್ ಆರಂಭದಿಂದಲೂ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದರು. 5 ರೌಂಡ್ಗಳ ನಂತರ 50.4 ಅಂಕಗಳೊಂದಿಗೆ ಕೊರಿಯಾದ ನಂತರ ಎರಡನೇ ಸ್ಥಾನದಲ್ಲಿದ್ದರು. ಇದಾದ ನಂತರವೂ ಮನು ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದರು. ಆದರೇ 10 ರೌಂಡ್ಗಳ ನಂತರ 100.3 ಪಾಯಿಂಟ್‌ಗಳೊಂದಿಗೆ ಸ್ವಲ್ಪ ಅಂತರದಿಂದಲೇ ಮೂರನೇ ಸ್ಥಾನಕ್ಕೆ ತಲುಪಿದರು. 15 ರೌಂಡ್ಳ ನಂತರ ಅವರ ಸ್ಕೋರ್ 150.7 ಆಗಿದ್ದು, ಮೂರನೇ ಸ್ಥಾನದಲ್ಲಿ ಮುಂದುವರೆದರು.
ಫೈನಲ್ ಸುತ್ತಿನ ವೇಳೆ ಒಟ್ಟು 221.7 ಅಂಕ ಕಲೆ ಹಾಕಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕೊರಿಯಾದ ಓಹ್ ಯೆ ಜಿನ್ 243.2 ಅಂಕಗಳೊಂದಿಗೆ ಚಿನ್ನ ಗೆದ್ದರೆ, ಕಿಮ್ ಯೆಜಿ 241.3 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.