Khel Ratna Award List: ಕ್ರೀಡಾ ಸಾಧಕರನ್ನು ಗುರುತಿಸಿ ನೀಡಲಾಗುವ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಧ್ಯಾನ್ಚಂದ್ ಖೇಲ್ ರತ್ನ ಪ್ರಶಸ್ತಿಗೆ ನಾಲ್ವರ ಹೆಸರನ್ನು ಪ್ರಕಟಿಸಲಾಗಿದೆ. ಒಲಿಂಪಿಕ್ಸ್ ಡಬಲ್ ಪದಕ ವಿಜೇತೆ ಮನುಭಾಕರ್, ಚೆಸ್ ವಿಶ್ವ ಚಾಂಪಿಯನ್ ಡಿ. ಗುಕೇಶ್, ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಪ್ರವೀಣ್ ಕುಮಾರ್ ಅವರ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಘೋಷಿಸಲಾಗಿದೆ.
ಇದಲ್ಲದೇ 17 ಪ್ಯಾರಾ ಅಥ್ಲೀಟ್‌ಗಳು ಸೇರಿದಂತೆ ಒಟ್ಟು 32 ಅಥ್ಲೀಟ್‌ಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜನವರಿ 17 ರಂದು ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಏತನ್ಮಧ್ಯೆ, ಇತ್ತೀಚೆಗೆ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾದ ಅಥ್ಲೀಟ್‌ಗಳ ಪಟ್ಟಿಯಲ್ಲಿ ಮನು ಭಾಕರ್ ಅವರ ಹೆಸರನ್ನು ಸೇರಿಸಲಾಗಿಲ್ಲ ಎಂದು ವಿವಾದ ಹುಟ್ಟಿಕೊಂಡಿತ್ತು. ಅಲ್ಲದೇ ಮನು ಅವರ ತಂದೆ ರಾಮ್ ಕಿಶನ್ ತೀವ್ರ ಅಸಮಾಧಾನ ಹೊರ ಹಾಕಿದ್ದರು. ಮನುವನ್ನು ಶೂಟರ್ ಮಾಡುವ ಬದಲು ಕ್ರಿಕೆಟಿಗನನ್ನಾಗಿ ಮಾಡಿದ್ದರೆ ಚೆನ್ನಾಗಿತ್ತು. ಆಗ ಎಲ್ಲ ಪ್ರಶಸ್ತಿ, ಪುರಸ್ಕಾರಗಳು ಹರಿದು ಬರುತ್ತಿದ್ದವು ಎಂದು ಆರೋಪಿಸಿದ್ದರು. ಅಲ್ಲದೇ ಪ್ರಶಸ್ತಿಗಾಗಿ ಭಿಕ್ಷೆ ಬೇಡುವುದರಲ್ಲಿ ಅರ್ಥವಿಲ್ಲ ಎಂದಿದ್ದರು.
ಇದರ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿದ್ದ ಮನು, ಪ್ರಶಸ್ತಿಗಾಗಿ ಸಲ್ಲಿಸುವ ಅರ್ಜಿಯಲ್ಲಿ ಕೆಲ ತಪ್ಪುಗಳು ಆಗಿದ್ದು, ಸರಿ ಪಡಿಸಿ ಮತ್ತೊಮ್ಮೆ ಅರ್ಜಿಸಲ್ಲಿಸುವುದಾಗಿ ಹೇಳಿದ್ದರು. ಇದೀಗ 2024ರ ಖೇಲ್ ರತ್ನ ಪ್ರಶಸ್ತಿಗೆ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ. ಆದರೆ, ಈ ಬಾರಿ ಕ್ರಿಕೆಟ್ ಆಟಗಾರರಿಗೆ ಯಾವುದೇ ಪ್ರಶಸ್ತಿ ಸಿಕ್ಕಿಲ್ಲ. ಧ್ಯಾನ್ ಚಂದ್ರ ಖೇಲ್ ರತ್ನ ಪ್ರಶಸ್ತಿಗಳಲ್ಲಿ ಯಾವುದೇ ಕ್ರಿಕೆಟ್ ಆಟಗಾರರನ್ನು ಸೇರಿಸದೇ ಇರುವುದು ಅಚ್ಚರಿ ಮೂಡಿಸಿದೆ. ಆಟಗಾರನಿರಲಿ, ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ವ್ಯಕ್ತಿಯ ಹೆಸರನ್ನು ಕೋಚ್ ವಿಭಾಗದಲ್ಲೂ ಸೇರಿಸಲಾಗಿಲ್ಲ. ಇದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.