ಬೆಂಗಳೂರು:ಮಹಾರಾಜ ಟ್ರೋಫಿ ಮೂರನೇ ಸೀಸನ್‌ನ ಮೊದಲ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಬೆಂಗಳೂರು ಬ್ಲಾಸ್ಟರ್ಸ್ ತಂಡ ಶುಭಾರಂಭ ಮಾಡಿತು. ಮೊದಲು ಬ್ಯಾಟ್ ಮಾಡಿ ಗುಲ್ಬರ್ಗ ನೀಡಿದ್ದ 117 ರನ್‌ಗಳನ್ನು ಬೆಂಗಳೂರು 11.4 ಓವರ್‌ಗಳಲ್ಲಿ ಸುಲಭವಾಗಿ ಮುಟ್ಟಿತು.
ಬೆಂಗಳೂರು ತಂಡದ ಎಲ್.ಆರ್.ಚೇತನ್ ಅರ್ಧಶತಕ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವವುಳ್ಳ ನಾಯಕ ಮಯಾಂಕ್ ಅಗರ್ವಾಲ್ ಅಜೇಯ 47 ರನ್ ಬಾರಿಸಿ ಗೆಲುವನ್ನು ಸುಲಭವಾಗಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಲ್ಬರ್ಗಕ್ಕೆ ಬೆಂಗಳೂರು ಬೌಲರ್‌ಗಳು ಆರಂಭದಿಂದಲೇ ಕಡಿವಾಣ ಹಾಕಿದರು. ಆದಿತ್ಯ ಗೋಯಲ್, ಲವೀಶ್ ಕುಶಲ್, ಜ್ಞಾನೇಶ್ವರ್ ನವೀನ್, ಮೊಹ್ಸೀನ್ ಖಾನ್ ದಾಳಿಗೆ ಸಿಲುಕಿದ ತಂಡ ರನ್ ಗಳಿಸಲು ಪರದಾಡಿತು. ನಾಯಕ ದೇವದತ್ ಪಡಿಕ್ಕಲ್ ಗಳಿಸಿದ 20, ಪ್ರವೀಣ್ ದುಬೆ 19 ರನ್‌ಗಳೇ ತಂಡದ ಪರ ಗರಿಷ್ಠ ಮೊತ್ತವಾಯಿತು. ಉಳಿದಂತೆ ಎಲ್ಲ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಬ್ಲಾಸ್ಟರ್ಸ್ ಪರ ಆದಿತ್ಯ ಗೋಯಲ್ 3 ವಿಕೆಟ್ ಪಡೆದರೆ, ಲವೀಶ್ ಕೌಶಲ್, ನವೀನ್ ಎಂ.ಜಿ ಹಾಗೂ ಮೊಹ್ಸೀನ್ ಖಾನ್ ತಲಾ 2 ವಿಕೆಟ್ ಪಡೆದರು. ಬೆಂಗಳೂರಿನ ಬಿಗಿ ದಾಳಿಗೆ ನಲುಗಿದ ಗುಲ್ಬರ್ಗ 16.4 ಓವರ್‌ಗಳಲ್ಲಿ 116 ರನ್ ಗಳಿಸಿ ಸರ್ವಪತನ ಕಂಡಿತು.
ಶತಕದ ಜೊತೆಯಾಟ:117 ರನ್ಗಳ ಸಲೀಸು ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡದ ಆರಂಭಿಕ ಜೋಡಿಯಾದ ಎಲ್.ಆರ್.ಚೇತನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಶತಕದ ಜೊತೆಯಾಟ ನೀಡುವ ಮೂಲಕ ಗೆಲುವನ್ನು ಏಕಮೇವವಾಗಿ ಮಾಡಿದರು. ಇಬ್ಬರೂ ಸೇರಿ 9.5 ಓವರ್‌ಗಳಲ್ಲಿ 101 ರನ್ ಪೇರಿಸಿದರು. 6 ಓವರ್ಗಳ ಪವರ್ಪ್ಲೇನಲ್ಲಿ ಅಬ್ಬರಿಸುವ ಮೂಲಕ ತಂಡದ ಗೆಲುವನ್ನು ಖಾತ್ರಿಪಡಿಸಿದರು. ಚೇತನ್ 34 ಎಸೆತಗಳಲ್ಲಿ 3 ಸಿಕ್ಸರ್, 5 ಬೌಂಡರಿಸಮೇತ 53 ರನ್ ಬಾರಿಸಿದರು.
ಗೆಲುವಿನ ಸನಿಹದಲ್ಲಿದ್ದಾಗ ಅರ್ಧಶತಕ ಗಳಿಸಿ ಆಡುತ್ತಿದ್ದ ಚೇತನ್, ವೈಶಾಕ್ ವಿಜಯ್ ಕುಮಾರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಬಂದ ಭುವನ್ ರಾಜು 7 ರನ್ ಗಳಿಸಿ ಗೆಲುವಿನ ಶಾಸ್ತ್ರ ಮುಗಿಸಿದರು. ಔಟಾಗದೇ ಉಳಿದ ಮಯಾಂಕ್ 29 ಎಸೆತಗಳಲ್ಲಿ 47 ರನ್ ಗಳಿಸಿದರು. ಈ ಮೂಲಕ 1 ವಿಕೆಟ್ ಕಳೆದುಕೊಂಡ ಬ್ಲಾಸ್ಟರ್ಸ್ ಮೊದಲ ಗೆಲುವಿನ ಸಿಹಿ ಅನುಭವಿಸಿತು.
ಸಂಕ್ಷಿಪ್ತ ಸ್ಕೋರ್ ವಿವರ: ಗುಲ್ಬರ್ಗ ಮಿಸ್ಟಿಕ್ಸ್-116/10(16.4 ಓವರ್), ದೇವದತ್ ಪಡಿಕ್ಕಲ್ 20(9), ಪ್ರವೀಣ್ ದುಬೆ 19(23), ಆದಿತ್ಯ ಗೋಯಲ್ 3/43, ನವೀನ್ ಎಂ.ಜಿ 2/8.
ಬೆಂಗಳೂರು ಬ್ಲಾಸ್ಟರ್ಸ್-117/1(11.2 ಓವರ್), ಎಲ್.ಆರ್.ಚೇತನ್ 53(34), ಮಯಾಂಕ್ ಅಗರ್ವಾಲ್ 47*(29), ವೈಶಾಕ್ ವಿಜಯ್ ಕುಮಾರ್ 1/44.
ಇದನ್ನೂ ಓದಿ:ಮಹಿಳಾ ಟಿ20 ವಿಶ್ವಕಪ್ ಆತಿಥ್ಯ ಪ್ರಸ್ತಾಪ ತಿರಸ್ಕರಿಸಿದ ಬಿಸಿಸಿಐ: ಜಯ್ ಶಾ ಕೊಟ್ಟ ಕಾರಣಗಳಿವು - BCCI Rejected ICC Offer