ಲಖನೌ (ಉತ್ತರ ಪ್ರದೇಶ): ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್ ಮತ್ತು ಕೃನಾಲ್ ಪಾಂಡ್ಯ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ಗಳ ಪೇರಿಸಿ, ಎದುರಾಳಿ ತಂಡದ ಗೆಲುವಿಗೆ 200 ರನ್ಗಳ ಗುರಿ ನೀಡಿದೆ.
ಇಲ್ಲಿನ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ ಟೂರ್ನಿಯ 11ನೇ ಪಂದ್ಯದಲ್ಲಿ ಲಖನೌ ಮತ್ತು ಪಂಜಾಬ್ ಮುಖಾಮುಖಿಯಾಗಿವೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕ ಕೆ.ಎಲ್.ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಇಬ್ಬರೂ ಮೊದಲ ನಾಲ್ಕು ಓವರ್‌ಗಳಲ್ಲಿ ಬೋರ್ಡ್‌ನಲ್ಲಿ 35 ರನ್ ಸೇರಿಸಿದರು. ತಂಡದ ನಾಯಕತ್ವಕ್ಕಿಂತ ಇಂಪ್ಯಾಕ್ಟ್ ಸಬ್ ಆಗಿ ಆಡಿದ ರಾಹುಲ್, ಸಿಕ್ಸರ್ ಮತ್ತು ಬೌಂಡರಿ ಸಮೇತ 15 ರನ್ ಸಿಡಿಸಿ ಅರ್ಷ್‌ದೀಪ್ ಸಿಂಗ್ ಬೌಲಿಂಗ್ನಲ್ಲಿ ಸುಲಭದ ಕ್ಯಾಚ್ ನೀಡಿ ನಿರ್ಗಮಿಸಿದರು.
ಲಖನೌ ಪರ ತನ್ನ ಎರಡನೇ ಪಂದ್ಯವನ್ನು ಆಡುತ್ತಿರುವ ದೇವದತ್ ಪಡಿಕ್ಕಲ್ ಕೇವಲ 9 ರನ್ ಗಳಿಸಿ ಸ್ಯಾಮ್ ಕುರ್ರಾನ್ ಬೌಲಿಂಗ್ನಲ್ಲಿ ಔಟಾದರು. ನಾಲ್ಕನೇ ಕಮಾಂಕ್ರಮದಲ್ಲಿ ಬಂದ ಮಾರ್ಕಸ್ ಸ್ಟೊಯಿನಿಸ್, ಡಿ ಕಾಕ್ ಜೊತೆ ಸೇರಿ ಉತ್ತಮ ಇನ್ನಿಂಗ್ಸ್ ಕಟ್ಟುವ ಭರವಸೆ ನೀಡಿದರು. 19 ರನ್ ಗಳಿಸಿ ರಾಹುಲ್ ಚಾಹರ್ ಬೌಲಿಂಗ್ನಲ್ಲಿ ಬೋಲ್ಡ್ ಆದರು. ನಂತರದ ಬಂದ ನಾಯಕ ನಿಕೋಲಸ್ ಪೂರನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಮತ್ತೊಂದೆಡೆ, ಡಿ ಕಾಕ್ 34 ಎಸೆತಗಳಲ್ಲಿ 150 ಸ್ಟ್ರೈಕ್ ರೇಟ್‌ನೊಂದಿಗೆ ಅರ್ಧಶತಕ ಪೂರೈಸಿದರು. ಆದರೆ, ಇದಾದ ಸ್ವಲ್ಪ ಹೊತ್ತಿನಲ್ಲಿ ಅರ್ಷದೀಪ್ ಸಿಂಗ್ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ವಿಕೆಟ್ ಒಪ್ಪಿಸಿದರು. ಡಿ ಕಾಕ್ ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 54 ರನ್ ಗಳಿಸಿದರು. ಬಿರುಸಿನ ಆಟವಾಡಿದ ನಾಯಕ ಪೂರನ್ 21 ಎಸೆತಗಳಲ್ಲಿ 42 ರನ್ ಸಿಡಿಸಿ ನಿರ್ಗಮಿಸಿದರು. ನಂತರದಲ್ಲಿ ಸ್ಪಿನ್ನರ್ ಕೃನಾಲ್ ಪಾಂಡ್ಯ ತಂಡದ ಸ್ಕೋರ್ ಹೆಚ್ಚಿಸುವ ಪ್ರಮುಖ ಪಾತ್ರ ವಹಿಸಿದರು. ಜವಾಬ್ದಾರಿಯುತ ಆಟವಾಡಿದ 22 ಬಾಲ್ಗಳಲ್ಲಿ 43 ರನ್ ಸಿಡಿಸಿ ಅಜೇಯರಾಗಿ ಉಳಿದರು. ಇದರಿಂದ ಲಖನೌ ತಂಡಕ್ಕೆ 8 ವಿಕೆಟ್ ನಷ್ಟಕ್ಕೆ 199 ರನ್ಗಳ ಕಲೆ ಹಾಕಲು ಸಾಧ್ಯವಾಯಿತು.