ಆಂಟಿಗುವಾ:ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 50 ರನ್ಗಳಿಂದ ಮಣಿಸಿದ ಭಾರತ ಸೆಮಿಫೈನಲ್ ಸನಿಹದಲ್ಲಿದೆ. ಬಾಂಗ್ಲಾ ವಿರುದ್ಧ ಆಲ್ರೌಂಡರ್ ಪ್ರದರ್ಶನದ ಮೂಲಕ ಹಾರ್ದಿಕ್ ಪಾಂಡ್ಯ ಮಿಂಚಿದರು. ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದ ಪಾಂಡ್ಯ, ಇತ್ತೀಚೆಗೆ ತಾವೆದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದರು.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಬೌಲಿಂಗ್ ವೇಳೆ ಎಡವಿದ್ದ ಪಾಂಡ್ಯ, ಗಾಯದಿಂದಾಗಿ ಕ್ರಿಕೆಟ್ನಿಂದ ದೂರವಾಗಿದ್ದರು. ತದನಂತರ ಐಪಿಎಲ್ ಮೂಲಕ ಕಮ್ಬ್ಯಾಕ್ ಮಾಡಿದ್ದರೂ ಸಹ, ಬ್ಯಾಟಿಂಗ್ ಹಾಗೂ ಮುಂಬೈ ಇಂಡಿಯನ್ಸ್ ನಾಯಕತ್ವದಲ್ಲಿ ವೈಫಲ್ಯ ಅನುಭವಿಸಿದ್ದರು. ಇದೀಗ ಟಿ20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಶನಿವಾರ ಬಾಂಗ್ಲಾದೇಶದ ಜೊತೆ ಅಂತಿಮ ಓವರ್ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಅಜೇಯ ಅರ್ಧಶತಕ (50, 27 ಬಾಲ್) ಬಾರಿಸಿದ್ದರಲ್ಲದೆ, ಆರಂಭಿಕ ಆಟಗಾರ ಲಿಟನ್ ದಾಸ್ ವಿಕೆಟ್ ಪಡೆದು ಟೀಂ ಇಂಡಿಯಾಕ್ಕೆ ಆರಂಭಿಕ ಯಶಸ್ಸು ಒದಗಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್, ''ನಾನು ದೇಶಕ್ಕಾಗಿ ಆಡಲು ಅದೃಷ್ಟಶಾಲಿಯಾಗಿದ್ದೇನೆ. ವಿಶ್ವಕಪ್ನಲ್ಲಿ ನನಗಾಗಿದ್ದು ವಿಚಿತ್ರ ಗಾಯ. ನಾನು ಆ ಟೂರ್ನಿಗೆ ಹಿಂತಿರುಗಲು ಬಯಸಿದ್ದೆ, ಆದರೆ ದೇವರ ಯೋಜನೆಗಳು ಬೇರೆಯದೇ ಆಗಿದ್ದವು'' ಎಂದರು.
''ಕಷ್ಟಪಟ್ಟು ಕೆಲಸ ಮಾಡುವವರಿಗೆ ಅದೃಷ್ಟವೂ ಬರುತ್ತದೆ ಎಂದು ನಮ್ಮ ಕೋಚ್ ರಾಹುಲ್ ಸರ್ ಅವರು ನನಗೆ ಹೇಳುತ್ತಿದ್ದರು. ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರೂ ಒಟ್ಟಾಗಿ ನಮ್ಮ ಪ್ಲಾನ್ಗಳನ್ನು ಕಾರ್ಯಗತಗೊಳಿಸಿದ್ದೇವೆ'' ಎಂದು ತಿಳಿಸಿದರು.