ಚೆನ್ನೈ: ಮಂಗಳವಾರ ನಡೆದ ಐಪಿಎಲ್ನ 39ನೇ ಪಂದ್ಯದಲ್ಲಿ ಆಲ್ರೌಡಂರ್ ಮಾರ್ಕಸ್ ಸ್ಟೊಯಿನಿಸ್ ಸ್ಪೋಟಕ್ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ರೋಚಕ ಗೆಲುವು ಸಾಧಿಸಿದೆ. ಚೆನ್ನೈ ನೀಡಿದ್ದ ಬೃಹತ್ ಗುರಿಯನ್ನು 19.3 ಓವರ್‌ಗಳಲ್ಲಿ ತಲುಪುವ ಮೂಲಕ ಈ ಋತುವಿನಲ್ಲಿ ಐದನೇ ಗೆಲುವು ಸಾಧಿಸಿ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ ಋತುರಾಜ್ ಗಾಯಕ್ವಾಡ್ (108) ಶತಕ, ಶಿವಂ ದುಬೆ (66) ಅರ್ಧಶತಕದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 210 ರನ್‌ಗಳ ಬೃಹತ್ ಗುರಿಯನ್ನು ಕಲೆ ಹಾಕಿತ್ತು.
ಈ ಗುರಿಯನ್ನು ಬೆನ್ನಟಿದ ಲಖನೌ ಜೈಂಟ್ಸ್ ಕಳಪೆ ಆರಂಭ ಪಡೆಯಿತು. ಪವರ್ ಪ್ಲೇನಲ್ಲೇ ತಮ್ಮ ಆರಂಭಿಕ ಬ್ಯಾಟರ್ಗಳಾದ ಕ್ವಿಂಟನ್ ಡಿ ಕಾಕ್, ನಾಯಕ ಕೆಎಲ್ ರಾಹುಲ್ ವಿಕೆಟ್ ಕೈಚೆಲ್ಲುವ ಮೂಲಕ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ, ತಂಡಕ್ಕೆ ಆಸರೆಯಾದ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೋಲಸ್ ಪೂರನ್ ಜವಾಬ್ದಾರಿಯುತವಾಗಿ ಇನ್ನಿಂಗ್ಸ್ ನಿಭಾಯಿಸಿದರು. ಇಬ್ಬರು ಬ್ಯಾಟರ್ಗಳು 70 ರನ್‌ಗಳ ಜೊತೆಯಾಟವಾಡಿದರು. ನಿಕೋಲಸ್ 15 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 34 ರನ್ ಚಚ್ಚಿ ನಿರ್ಗಮಿಸಿದರು.
ಮತ್ತೊಂದೆಡೆ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಬಿರುಸಿನ ಬ್ಯಾಟ್ ಮಾಡಿ ಚೊಚ್ಚಲ ಶತಕ ಸಿಡಿಸಿದರು. 63 ಎಸೆತಗಳನ್ನು ಎದುರಿಸಿದ ಅವರು 13 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 124 ರನ್ ಗಳಿಸಿ ಸಿಎಸ್ಕೆ ಗೆಲುವನ್ನು ಕಸಿದರು. ಚೆನ್ನೈ ಪರ ಮತಿಶ ಪತಿರಾನ 2 ವಿಕೆಟ್, ದೀಪಕ್ ಚಹಾರ್ ಮತ್ತು ಮುಸ್ತಾಫಿಜುರ್ ರೆಹಮಾನ್ ತಲಾ 1 ವಿಕೆಟ್ ಪಡೆದರು.