ಪ್ಯಾರಿಸ್ (ಫ್ರಾನ್ಸ್): ಭಾರತದ ಸ್ಟಾರ್ ಶಟ್ಲರ್ ಲಕ್ಷ್ಯ ಸೇನ್ ಇಂಡೋನೇಷ್ಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ಗೂ ಅರ್ಹತೆ ಪಡೆದಿದ್ದಾರೆ.
ಬುಧವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ವಿಶ್ವದ 4ನೇ ಶ್ರೇಯಾಂಕದ ಜೊನಾಟನ್ ಕ್ರಿಸ್ಟಿ ವಿರುದ್ಧ ನೇರ ಸೆಟ್ಗಳಿಂದ ಗೆಲುವು ಸಾಧಿಸಿದರು. 51 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಲಕ್ಷ್ಯ ಮತ್ತು ಕ್ರಿಸ್ಟಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೂ, ಭಾರತದ ಶಟ್ಲರ್ ಎದುರಾಳಿ ಮೇಲೆ ಮುನ್ನಡೆ ಸಾಧಿಸುತ್ತಲೇ ಸಾಗಿದರು. ಮೊದಲ ಸುತ್ತಿನಲ್ಲಿ ಬಲಿಷ್ಠ ಶಟ್ಲರ್ ಅನ್ನು 21-18 ಅಂತರದಿಂದ ಬಗ್ಗು ಬಡಿದು ಗೆಲುವು ಸಾಧಿಸಿದರು. ಈ ಸೆಟ್ ಗೆಲ್ಲಲು ಲಕ್ಷ್ಯ ಸೇನ್ 28 ನಿಮಿಷಗಳನ್ನು ತೆಗೆದುಕೊಂಡರು. ಎರಡನೇ ಸುತ್ತಿನಲ್ಲೂ ಅದೇ ಆಟವನ್ನು ಮುಂದುವರೆಸಿದ ಲಕ್ಷ್ಯ, 21-12 ಅಂತದರಿಂದ 23 ನಿಮಿಷಗಳಲ್ಲಿ ಕ್ರಿಸ್ಟಿಯನ್ನು ಸೋಲಿಸಿ ಗೆಲುವು ತಮ್ಮದಾಗಿಸಿಕೊಂಡರು.
ಚೊಚ್ಚಲ ಒಲಿಪಿಂಕ್ಸ್ ಆಡುತ್ತಿರುವ ಲಕ್ಷ್ಯ ಸೇನ್ ಅವರ ಮೊದಲ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು. ಪ್ರತಿಸ್ಪರ್ಧಿ ಕೆವಿನ್ ಕಾರ್ಡೆನ್ ಎಡ ಮೊಣಕೈ ಗಾಯದಿಂದ ಆಟದಿಂದ ಹೊರಬಿದ್ದ ಕಾರಣ ಪಂದ್ಯವನ್ನು ಡ್ರಾನಲ್ಲಿ ಮುಕ್ತಾಯ ಗೊಳಿಸಲಾಯಿತು.