ಚೆನ್ನೈ(ತಮಿಳುನಾಡು):ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ಗಳ ಸಂಘಟಿತ ಪ್ರದರ್ಶನ ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 137 ರನ್ಗಳ ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದೆ. ತವರಿನಲ್ಲಿ ಸಿಎಸ್ಕೆ ಗೆಲ್ಲಲು 138 ರನ್ಗಳ ಅವಶ್ಯಕತೆ ಇದೆ. ಕಳೆದ ಪಂದ್ಯಕ್ಕೆ ಹೋಲಿಸಿದರೆ ಸಿಎಸ್ಕೆ ಎದುರು ಕೆಕೆಆರ್ ಬ್ಯಾಟರ್ಗಳ ಆಟ ನಡೆಯಲಿಲ್ಲ.
ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ಆರಂಭದಲ್ಲೇ ಫಿಲಿಪ್ ಸಾಲ್ಟ್ ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಅದ್ಭುತವಾಗಿ ಆಡಿದ್ದ ಸಾಲ್ಟ್, ಸಿಎಸ್ಕೆ ಎದುರು ಮಂಕಾದರು. 2ನೇ ವಿಕೆಟ್ಗೆ ಬಂದ ಯುವ ಬ್ಯಾಟರ್ ಅಂಗಕೃಷ್ ರಘುವಂಶಿ ಅವರು ಸುನಿಲ್ ನರೈನ್ ಜತೆಗೂಡಿ ಉತ್ತಮ ಪ್ರದರ್ಶನ ತೋರಿದರು. ಸಿಕ್ಸರ್, ಬೌಂಡರಿ ಸಿಡಿಸಿ ಬೃಹತ್ ರನ್ ಕಲೆಹಾಕುವ ಸುಳಿವು ನೀಡಿದರು.
ಆದರೆ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ರಘುವಂಶಿ ವಿಕೆಟ್ ಒಪ್ಪಿಸಿದರು. ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದ್ದ ಸುನಿಲ್ ನರೈನ್ (27) ಅವರನ್ನೂ ತಮ್ಮದೇ ಓವರ್ನಲ್ಲಿ ಜಡೇಜಾ ಔಟ್ ಮಾಡಿದರು. ವೆಂಕಟೇಶ್ ಅಯ್ಯರ್ ಕೂಡಾ ತಂಡಕ್ಕೆ ಆಸರೆಯಾಗಲಿಲ್ಲ.
ಹೀಗೆ ವಿಕೆಟ್ಗಳು ಬೀಳುತ್ತಿದ್ದರೂ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಮಂದಗತಿ ಆಟದ ಮೂಲಕ ರನ್ ಸೇರಿಸಿದರು. ಈ ಹಂತದಲ್ಲಿ 13 ರನ್ಗಳಿಸಿದ ರಮಣದೀಪ್ ಸಿಂಗ್ ಮಹೇಶ್ ತೀಕ್ಷಣ ಅವರಿಗೆ ವಿಕೆಟ್ ಒಪ್ಪಿಸಿದರು. ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಹೊಡಿ ಬಡಿ ಆಟಗಾರ ರಿಂಕು ಸಿಂಗ್ (9) ಕೂಡಾ ತಂಡಕ್ಕೆ ಅವಶ್ಯಕತೆ ಇದ್ದಾಗ ಹೇಳಿಕೊಳ್ಳವಂತಹ ಪ್ರದರ್ಶನ ನೀಡಲಿಲ್ಲ.