Karun Nair: ವೀರೇಂದ್ರ ಸೆಹ್ವಾಗ್ ಬಳಿಕ ಟೆಸ್ಟ್ನಲ್ಲಿ ತ್ರಿಶತಕ ಸಿಡಿಸಿದ ಎರಡನೇ ಬ್ಯಾಟರ್ ಎಂಬ ದಾಖಲೆಯನ್ನು ಬರೆದಿರುವ ಕನ್ನಡಿಗ ಕರುಣ್ ನಾಯರ್ ಇದೀಗ ದೇಶಿ ಕ್ರಿಕೆಟ್ನಲ್ಲೂ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದಾರೆ.
ಭಾನುವಾರ ರಾಜಸ್ಥಾನ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ಮತ್ತೊಂದು ಶತಕ ಸಿಡಿಸುವ ಮೂಲಕ ತಂಡವನ್ನು ಸೆಮಿಫೈನಲ್ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಂದ್ಯದಲ್ಲಿ ವಿದರ್ಭ 9 ವಿಕೆಟ್ಗಳಿಂದ ರಾಜಸ್ಥಾನ ತಂಡವನ್ನು ಮಣಿಸಿತು. ತಂಡದ ಗೆಲುವಿನಲ್ಲಿ ಕರುಣ್ ನಾಯರ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಅಜೇಯವಾಗಿ 122 ರನ್ ಕಲೆಹಾಕಿದರು. ಇದರೊಂದಿಗೆ ದಾಖಲೆಯನ್ನು ಬರೆದಿದ್ದಾರೆ.
33ರ ಹರೆಯದ ಕರಣ್ ಇದುವರೆಗೂ ವಿಜಯ್ ಹಜಾರೆ ಟೂರ್ನಿಯಲ್ಲಿ 5 ಶತಕಗಳನ್ನು ಸಿಡಿಸಿದ್ದಾರೆ. ಜೊತೆಗೆ ಒಂದೇ ಋತುವಿನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ತಮಿಳುನಾಡಿನ ಬ್ಯಾಟರ್ ಎನ್ ಜಗದೀಶನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಜನವರಿ 3 ರಂದು ಯುಪಿ ವಿರುದ್ಧ ಮೊದಲ ಶತಕ, ಡಿಸೆಂಬರ್ 31 ರಂದು ತಮಿಳುನಾಡು ವಿರುದ್ಧ ಎರಡನೇ ಶತಕ, ಡಿಸೆಂಬರ್ 28 ರಂದು ಚಂಡೀಗಢ ವಿರುದ್ಧ 3ನೇ ಶತಕ, ಡಿಸೆಂಬರ್ 26 ರಂದು ಛತ್ತೀಸ್ಗಢ ವಿರುದ್ಧ ಮತ್ತು ಜಮ್ಮು ಕಾಶ್ಮೀರ ವಿರುದ್ಧ ಅಜೇಯ ಇನ್ನಿಂಗ್ಸ್ಗಳನ್ನು ಆಡಿ ಶತಕ ಬಾರಿಸಿದ್ದಾರೆ. ಇದರೊಂದಿಗೆ 6 ಪಂದ್ಯಗಳಲ್ಲಿ 5 ಶತಕ ಸಮೇತ 664 ರನ್ ಚಚ್ಚಿದ್ದಾರೆ.
8 ವರ್ಷದ ವನವಾಸಕ್ಕೆ ಸಿಗುತ್ತಾ ಮುಕ್ತಿ?:ದೇಶಿ ಕ್ರಿಕೆಟ್ನಲ್ಲಿ ಸತತ ಶತಕ ಬಾರಿಸುವ ಮೂಲಕ ಸಂಚಲನ ಸೃಷ್ಟಿಸಿರುವ ಕರುಣ್ ನಾಯರ್ ಭಾರತ ತಂಡದಲ್ಲೂ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ನಾಯರ್ ಕೊನೆಯ ಬಾರಿಗೆ 2017ರಲ್ಲಿ ಟೀಮ್ ಇಂಡಿಯಾ ಪರ ಆಡಿದ್ದರು. ಆದರೆ, ಈಗ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಬದಲಾವಣೆ ಪರ್ವ ಶುರವಾಗಿದ್ದು, ಇಂತಹ ಸಮಯದಲ್ಲಿ ನಾಯರ್ ಉತ್ತಮ ಆಯ್ಕೆ ಆಗಲಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಎದುರಿಸಿತ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಹ ಬ್ಯಾಟರ್ಗಳು ವಿಫಲರಾಗಿದ್ದರು. ಮುಂದಿನ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ತಂಡದಲ್ಲಿ ಭಾರೀ ಬದಲಾವಣೆ ಆಗಲ್ಲಿದ್ದು ಕರಣ್ ನಾಯರ್ಗೆ ಚಾನ್ಸ್ ಸಿಗುವ ಸಾಧ್ಯತೆ ದಟ್ಟವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಒತ್ತಾಯ:ಏತನ್ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲೂ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ದೇಶಿ ಕ್ರಿಕೆಟ್ನಲ್ಲಿ ಶತಕಗಳ ಮೇಲೆ ಶತಕ ಬಾರಿಸುತ್ತಿರುವ ಕರುಣ್ ನಾಯರ್ಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಬೇಕು. ಜೊತೆಗೆ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕಪಿಲ್ ದೇವ್ ತಲೆಗೆ ಗುಂಡು ಹಾರಿಸಲು ಮನೆ ಮುಂದೆ ಹೋಗಿದ್ದೆ, ಆದ್ರೆ.. ಮಾಜಿ ಕ್ರಿಕೆಟರ್ ಸ್ಫೋಟಕ ಹೇಳಿಕೆ!