RCB Controversy:ಕಳೆದ ವಾರ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಭಾಗವಾಗಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆದಿತ್ತು. ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಒಟ್ಟು 639.15 ಕೋಟಿ ರೂ ಖರ್ಚು ಮಾಡಿ 182 ಆಟಗಾರರನ್ನು ಖರೀದಿಸಿದ್ದವು.
ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೂಡ ಒಂದಾಗಿತ್ತು. ಹರಾಜಿನಲ್ಲಿ ಆರ್‌ಸಿಬಿ, 19 ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡ ಕಟ್ಟಿದೆ. ಆದರೆ ಹರಾಜು ಮುಗಿಯುತ್ತಿದ್ದಂತೆ ವಿವಾದದಲ್ಲಿ ಸಿಲುಕಿದೆ.
ಆರ್‌ಸಿಬಿ ಫ್ರಾಂಚೈಸಿ ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಹಿಂದಿ ಖಾತೆ ತೆರೆದಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಖಾತೆಯನ್ನು ಅಕ್ಟೋಬರ್ 2024ರಲ್ಲಿ ಪ್ರಾರಂಭಿಸಲಾಗಿದೆ. ಹರಾಜು ಮುಕ್ತಾಯವಾಗುತ್ತಿದ್ದಂತೆ ಇದರಲ್ಲಿ ಕೆಲವು ಪೋಸ್ಟ್ಗಳನ್ನು ಹಿಂದಿಯಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೇ, ಖಾತೆ ಸುಮಾರು 2,500 ಅನುಯಾಯಿಗಳನ್ನು ಪಡೆದಿದೆ.
ಪೋಸ್ಟ್ಗಳು ಶೇರ್ ಆಗುತ್ತಿದ್ದಂತೆ ಅನೇಕ ಕನ್ನಡ ಪರ ಸಂಘಟನೆಗಳು ಮತ್ತು ಅಭಿಮಾನಿಗಳು ಆರ್‌ಸಿಬಿ ನಡೆಯನ್ನು ಟೀಕಿಸಿದ್ದಾರೆ. ಕನ್ನಡ ಮಾತನಾಡುವ ಅಭಿಮಾನಿಗಳ ಮೇಲೆ ಬಲವಂತವಾಗಿ ಹಿಂದಿ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಲವರು ತಂಡದ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಖಂಡಿಸಿ ಪೋಸ್ಟ್ಗಳನ್ನು ಮಾಡಿದ್ದಾರೆ.
ಇದಲ್ಲದೆ, ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಖರೀದಿಸಿರುವ ಆರ್‌ಸಿಬಿ, ಅವರ ಎಐ ವೀಡಿಯೊವನ್ನು ಇದೇ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಲಿವಿಂಗ್‌ಸ್ಟೋನ್ ಹಿಂದಿಯಲ್ಲಿ ಅಭಿಮಾನಿಗಳಿಗೆ ಶುಭಾಶಯ ಕೋರುತ್ತಿರುವುದನ್ನು ಕಾಣಬಹುದು. ಇದಕ್ಕೆ ಅಸಮಾಧಾನ ಹೊರಹಾಕಿರುವ ಅಭಿಮಾನಿಗಳು, ಆರ್‌ಸಿಬಿಯ ಕನ್ನಡಿಗರ ತಂಡ. ಹಿಂದಿ ಪೇಜ್ ಆರಂಭಿಸುವ ಅವಶ್ಯಕತೆ ಏನಿತ್ತು?. ಮ್ಯಾನೇಜ್ಮೆಂಟ್ ಏನು ಸಂದೇಶ ನೀಡಲು ಬಯಸಿದೆ? ಎಂದು ಟೀಕಿಸಿದ್ದಾರೆ. ಕೆಲವರು, ಕೂಡಲೇ ಪೇಜ್ ಡಿಲೀಟ್ ಮಾಡಿ ಕನ್ನಡಿಗರನ್ನು ಗೌರವಿಸಿ ಎಂದಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ಕನ್ನಡ ಪರ ಹೋರಾಟಗಾರರು, ಈ ಫ್ರಾಂಚೈಸಿಗೆ ಬೆಂಬಲ ಕೊಡುತ್ತಿರುವುದು ತಂಡದಲ್ಲಿರುವ ಬೆಂಗಳೂರು ಅನ್ನೋ ಹೆಸರಿಗೆ. ನಮ್ಮ ತಂಡ ಅಂತ ಪ್ರೀತಿಸುವ ಕನ್ನಡಿಗರ ಪ್ರೀತಿಯನ್ನು ದುರುಪಯೋಗಪಡಿಸಿಕೊಳ್ಳಬೇಡಿ. ನಿಮ್ಮ ಐಪಿಎಲ್ ಕಪ್ ಮತ್ತು ಆರ್‌ಸಿಬಿ ತಂಡಕ್ಕಿಂತಲೂ ನಮಗೆ ಕನ್ನಡ ನೆಲದ ಸ್ವಾಭಿಮಾನವೇ ಹೆಚ್ಚು. ಕೂಡಲೇ ಪೇಜ್ ಡಿಲೀಟ್ ಮಾಡಿ ಎಂದು ಗರಂ ಆಗಿದ್ದಾರೆ.
ಇದನ್ನೂ ಓದಿ:ಭಾರತ ಕ್ರಿಕೆಟ್ ತಂಡವನ್ನು ಭೇಟಿ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ; ಸಂತಸ ವ್ಯಕ್ತಪಡಿಸಿದ ಮೋದಿ