ಬ್ರಿಸ್ಬೇನ್(ಆಸ್ಟ್ರೇಲಿಯಾ): ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷ ಜಯ್ ಶಾ ಅವರು ಬ್ರಿಸ್ಬೇನ್ 2032ರ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ಸ್ ಗೇಮ್ಸ್ ಆಯೋಜಕ ಸಮಿತಿ (ಒಸಿಒಜಿ) ಸಿಇಒ ಸಿಂಡಿ ಹುಕ್ ಅವರೊಂದಿಗೆ ಗುರುವಾರ ಸಭೆ ನಡೆಸಿದರು.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಶಾ, "ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆ ಮಾಡುವ ಬಹಳ ರೋಮಾಂಚನಕಾರಿ ಸಮಯ ಬಂದಿದೆ. ಈ ಕುರಿತು ಇಂದು ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ಸಂಘಟನಾ ಸಮಿತಿಯೊಂದಿಗೆ ಚರ್ಚೆ ನಡೆಯಿತು" ಎಂದು ಬರೆದಿದ್ದಾರೆ.
ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಮಾಡಿದ ನಂತರ ಒಲಿಂಪಿಕ್ ಕ್ಯಾಲೆಂಡರ್ನಲ್ಲಿ ಕ್ರಿಕೆಟ್ ಅನ್ನು ಮುಂದುವರಿಸಿಕೊಂಡು ಹೋಗುವ ಐಸಿಸಿಯ ಗುರಿಯ ಭಾಗವಾಗಿ ಈ ಸಭೆ ನಡೆದಿದೆ. ಈ ಮುನ್ನ 1990ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಪಂದ್ಯಗಳು ನಡೆದಿದ್ದವು. ಈಗ ಮತ್ತೊಮ್ಮೆ 2028ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ನ ವೈಭವ ಮರುಕಳಿಸಲಿದೆ.
ಡಿಸೆಂಬರ್ 1ರಂದು ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಾ, ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ ಕ್ರಿಕೆಟ್ ಅನ್ನು ಮತ್ತಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮತ್ತು ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳ ಆಕಾಂಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಒತ್ತಿ ಹೇಳಿದ್ದರು.