Ind vs Aus, Test Series: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಜಸ್ಟ್ರೀತ್ ಬುಮ್ರಾ ಇಂದು ಬಿಗು ಬೌಲಿಂಗ್ ಮೂಲಕ 3 ಹೊಸ ದಾಖಲೆ ಬರೆದರು.
ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೆಸ್ಟ್ ಪಂದ್ಯ ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಬುಮ್ರಾ 5 ವಿಕೆಟ್ ಉರುಳಿಸಿದ್ದಾರೆ.
ಬುಮ್ರಾ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಉಸ್ಮಾನ್ ಖವಾಜಾ ಮತ್ತು ನಾಥನ್ ಮೆಕ್‌ಸ್ವೀನಿ ಮತ್ತು ಮಿಚೆಲ್ ಮಾರ್ಷ್ ಅವರ ವಿಕೆಟ್ ಕಿತ್ತರು. ಇದರೊಂದಿಗೆ ಹಲವು ದೊಡ್ಡ ದಾಖಲೆಗಳನ್ನೂ ಬರೆದಿದ್ದಾರೆ. SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ದೇಶಗಳಲ್ಲಿ ಅತೀ ಹೆಚ್ಚು ಬಾರಿ ಐದು ವಿಕೆಟ್ (8) ಪಡೆದ ಭಾರತೀಯ ಬೌಲರ್ ಎನಿಸಿಕೊಂಡರು. ಈ ವಿಚಾರದಲ್ಲಿ ಮಾಜಿ ನಾಯಕ ಕಪಿಲ್ ದೇವ್ ಅವರನ್ನು ಹಿಂದಿಕ್ಕಿದ್ದಾರೆ.
ಒಟ್ಟಾರೆ ಟೆಸ್ಟ್ನಲ್ಲಿ ಅತೀ ಹೆಚ್ಚು ಬಾರಿ ಐದು ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಆಗಿದ್ದಾರೆ. ಬುಮ್ರಾ ಈವರೆಗೂ 12 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಕಪಿಲ್ ದೇವ್ ಅಗ್ರಸ್ಥಾನಿ. ಅವರು ಟೆಸ್ಟ್ನಲ್ಲಿ 23 ಬಾರಿ 5 ವಿಕೆಟ್ ಪಡೆದಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ 5 ವಿಕೆಟ್ ಪಡೆದ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ. ಅವರು ಆಸ್ಟ್ರೇಲಿಯನ್ ನಾಯಕ ಪ್ಯಾಟ್ ಕಮಿನ್ಸ್ ಅವರೊಂದಿಗೆ ಜಂಟಿಯಾಗಿ ನಂಬರ್ 1 ಸ್ಥಾನದಲ್ಲಿದ್ದಾರೆ.
ಇದಲ್ಲದೇ ಈ ವರ್ಷದಲ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಆಗಿದ್ದಾರೆ. ಈ ವರ್ಷ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಬುಮ್ರಾ ಒಟ್ಟು 73 ವಿಕೆಟ್ಗಳನ್ನು ಪಡೆದಿದ್ದಾರೆ.