ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2024ರ 58ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ಗೆ 242 ರನ್ ಗೆಲುವಿನ ಗುರಿ ನೀಡಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (92), ರಜತ್ ಪಾಟಿದಾರ್ (55) ಹಾಗೂ ಕ್ಯಾಮರೂನ್ ಗ್ರೀನ್ (46) ಅವರ ಅಬ್ಬರದ ಬ್ಯಾಟಿಂಗ್ನಿಂದ ಆರ್ಸಿಬಿ 7 ವಿಕೆಟ್ ನಷ್ಟಕ್ಕೆ ಬೃಹತ್ ಮೊತ್ತ ಕಲೆ ಹಾಕಿದೆ.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಮೂರನೇ ಓವರ್ನಲ್ಲಿ 9 ರನ್ ಗಳಿಸಿದ್ದ ನಾಯಕ ಫಾಫ್ ಡು ಪ್ಲೆಸಿಸ್ ವಿಧ್ವತ್ ಕಾವೇರಪ್ಪ ಬೌಲಿಂಗ್ನಲ್ಲಿ ಶಶಾಂಕ್ ಸಿಂಗ್ಗೆ ಕ್ಯಾಚ್ ನೀಡಿ ಹೊರನಡೆದರು. ಬಳಿಕ ಬಂದ ವಿಲ್ ಝಾಕ್ಸ್ ಕೂಡ ನಿರೀಕ್ಷೆ ಹುಸಿಗೊಳಿಸಿದರು. ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದ್ದ ಅವರು ಕೇವಲ 12 ರನ್ಗೆ ಪೆವಿಲಿಯನ್ಗೆ ಮರಳಿದರು.
ಆ ಬಳಿಕ ವಿರಾಟ್ ಕೊಹ್ಲಿ ಜೊತೆ ಒಂದಾದ ರಜತ್ ಪಾಟಿದಾರ್ ಬೆಂಗಳೂರು ತಂಡದ ಮೊತ್ತಕ್ಕೆ ಬಲ ತುಂಬಿದರು. ಭರ್ಜರಿ 6 ಸಿಕ್ಸರ್ ಬಾರಿಸಿದ ಪಾಟಿದಾರ್ 23 ಎಸೆತಗಳಲ್ಲಿ ಬಿರುಸಿದ ಅರ್ಧಶತಕ (55) ದಾಖಲಿಸಿದರು. ಅದರ ಬೆನ್ನಲ್ಲೇ ಸ್ಯಾಮ್ ಕರನ್ ಬೌಲಿಂಗ್ನಲ್ಲಿ ಬೈರ್ಸ್ಟೋಗೆ ಕ್ಯಾಚ್ ನೀಡಿ ಹೊರನಡೆದರು.