ಮುಂಬೈ(ಮಹಾರಾಷ್ಟ್ರ):ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಅಮೋಘ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದ್ದ ಹಾರ್ದಿಕ್ ಪಾಂಡ್ಯ ಪಡೆ ಒಂದು (9ನೇ) ಸ್ಥಾನ ಮೇಲೇರಿದೆ. ಮತ್ತೊಂದೆಡೆ, 4ನೇ ಸ್ಥಾನದಲ್ಲಿರುವ ಪ್ಯಾಟ್ ಕಮ್ಮಿನ್ಸ್ ಬಳಗ ಈ ಪಂದ್ಯ ಗೆದ್ದಿದ್ದರೆ ಪ್ಲೇ ಆಫ್ ಹಾದಿ ಸುಗಮವಾಗುತ್ತಿತ್ತು.
ವಾಂಖೆಡೆ ಮೈದಾನದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡಕ್ಕೆ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಗದಿದ್ದರೂ, ನಿಗದಿತ 20 ಓವರ್ಗಳಲ್ಲಿ 173 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಈ ಗುರಿಯನ್ನು ಮುಂಬೈ 17.2 ಓವರ್ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಪೂರೈಸಿದೆ.
ಸನ್ರೈಸರ್ಸ್ ಇನಿಂಗ್ಸ್:ಈ ಐಪಿಎಲ್ನಲ್ಲಿ ರನ್ ಹೊಳೆ ಹರಿಸುವ ಮೂಲಕ ಸನ್ರೈಸರ್ಸ್ ಗಮನ ಸೆಳೆದಿದೆ. ಆದರೆ, ಮುಂಬೈನಲ್ಲಿ ಬ್ಯಾಟರ್‌ಗಳಿಂದ ಅಂತಹ ಅಬ್ಬರದ ಪ್ರದರ್ಶನ ಬರಲಿಲ್ಲ. ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಮೊದಲ ವಿಕೆಟ್ಗೆ 56 ರನ್ ಕಲೆ ಹಾಕಿದ್ದು ಹೊರತುಪಡಿಸಿ, ದೊಡ್ಡ ಜೊತೆಯಾಟ ಮೂಡಿಬರಲಿಲ್ಲ.
ಆದರೆ, ಹೆಡ್ (41) ಮತ್ತು ಕೊನೆಯಲ್ಲಿ ನಾಯಕ ಕಮ್ಮಿನ್ಸ್ (35) ಆಟದಿಂದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಅಭಿಷೇಕ್ (11), ಮಯಾಂಕ್ ಅಗರ್ವಾಲ್ (5), ನಿತೀಶ್ ರೆಡ್ಡಿ (20), ಮ್ಯಾಕ್ರೋ ಜನ್ಸೆನ್ (17), ಶಹಬಾಜ್ ಅಹ್ಮದ್ 10 ರನ್ಗಳಿಗೆ ಸೀಮಿತವಾದರು. ಅಂತಿಮವಾಗಿ 8 ವಿಕೆಟ್ ಕಳೆದುಕೊಂಡು 173 ರನ್ಗಳನ್ನು ಹೈದರಾಬಾದ್ ಕಲೆ ಹಾಕಿತ್ತು. ಮುಂಬೈ ಪರ ನಾಯಕ ಹಾರ್ದಿಕ್ ಪಾಂಡ್ಯ, ಪಿಯೂಶ್ ಚಾವ್ಲಾ ತಲಾ 3 ವಿಕೆಟ್ ಮತ್ತು ಅಂಶುಲ್ ಕಾಂಬೋಜ್, ಜಸ್ಪೀತ್ ಬೂಮ್ರಾ ತಲಾ 1 ವಿಕೆಟ್ ಪಡೆದರು.