ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಪೇಜ್ ಪ್ರಾರಂಭಿಸಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಪಷ್ಟನೆ ನೀಡಿದೆ. ಕನ್ನಡದ ಬೇರುಗಳ ಮೇಲೆ ಸ್ಥಾಪಿತವಾಗಿರುವ ಆರ್‌ಸಿಬಿ ತಂಡ ಬಹು ಭಾಷೆಗಳಲ್ಲಿಯೂ ಕಂಟೆಂಟ್‌ಗಳನ್ನ ಒದಗಿಸುವ ಮೂಲಕ ಎಲ್ಲಾ ಅಭಿಮಾನಿಗಳೊಂದಿಗೆ ಆಳವಾದ ಸಂಪರ್ಕ ಸಾಧಿಸುವ ಯೋಜನೆ ಹೊಂದಿದೆ. ಅದರ ಭಾಗವಾಗಿ ಕನ್ನಡ ರಾಜ್ಯೋತ್ಸವದ ದಿನದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕನ್ನಡ ಪೇಜ್ ಸಹ ಆರಂಭಿಸಲಾಗಿದೆ ಎಂದಿದೆ.
ಇತ್ತೀಚಿಗೆ ಆರಂಭವಾದ ಆರ್‌ಸಿಬಿಯ ಕನ್ನಡದ ಇನ್‌ಸ್ಟಾಗ್ರಾಂ ಪೇಜ್ ಅದ್ಭುತ ಪ್ರತಿಕ್ರಿಯೆಯನ್ನ ಕಂಡಿದ್ದು, ಕೇವಲ ಒಂದೇ ತಿಂಗಳಿನಲ್ಲಿ 1.6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳಿಸಿದೆ. ಇದು ಸ್ಥಳೀಯ ಅಭಿಮಾನಿಗಳ ಬಗ್ಗೆ ಆರ್‌ಸಿಬಿ ತಂಡ ಹೊಂದಿರುವ ಗೌರವವನ್ನ ಎತ್ತಿ ತೋರಿಸುತ್ತದೆ. ಅದೇ ರೀತಿ ಇತರ ಸ್ಥಳೀಯ ಭಾಷೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮತ್ತಷ್ಟು ಅಭಿಮಾನಿಗಳೊಂದಿಗೆ ಆಳವಾದ ಸಂಪರ್ಕ ಸಾಧಿಸುವ ಗುರಿ ಹೊಂದಲಾಗಿದೆ. ಈ ಡಿಜಿಟಲ್ ತಂತ್ರದೊಂದಿಗೆ, ಎಲ್ಲ ಕ್ರಿಕೆಟ್ ಪ್ರೇಮಿಗಳಿಗೆ ಆಟಗಾರರ ಕಥೆಗಳನ್ನ ತಲುಪಿಸುವ ಗುರಿಯನ್ನ ಆರ್‌ಸಿಬಿ ಹೊಂದಿದೆ.
ಕನ್ನಡ ಪುಟಕ್ಕಾಗಿ ಕಂಟೆಂಟ್‌ಗಳನ್ನ ನೀಡುವುದರ ಜೊತೆಗೆ ಅನೇಕ ಇತರೆ ಭಾರತೀಯ ಭಾಷೆಗಳಿಗೆ ವಿಷಯವನ್ನು ಡಬ್ಬಿಂಗ್ ಮಾಡುವ ಕೆಲಸವನ್ನ ಮಾಡಲಾಗುತ್ತಿದೆ. ದೇಶದ ರೋಮಾಂಚಕ ಸಂಸ್ಕೃತಿಯ ಆಚರಣೆಯಲ್ಲಿ ಕರ್ನಾಟಕವು ಸದಾ ಮುಂಚೂಣಿಯಲ್ಲಿದೆ. ಕನ್ನಡ ಪೇಜ್‍ಗೆ ಸಿಕ್ಕ ಬೆಂಬಲ ಆರ್‌ಸಿಬಿ ಮತ್ತಷ್ಟು ಅಭಿಮಾನಿಗಳನ್ನ ಹತ್ತಿರ ತರಲು ಪ್ರೋತ್ಸಾಹಿಸಿದೆ. ತನ್ನ ಅಭಿಮಾನಿಗಳ ವೈವಿಧ್ಯತೆಯನ್ನು ಅಪ್ಪಿಕೊಂಡು ಸಂಭ್ರಮಿಸುತ್ತಾ ಅವರನ್ನ ತಂಡಕ್ಕೆ ಹತ್ತಿರ ತರುವುದು ನಮ್ಮ ಉದ್ದೇಶವಾಗಿದೆ'' ಎಂದು ಆರ್‌ಸಿಬಿ ತಂಡ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಆರ್‌ಸಿಬಿ ತಂಡದ ಮುಖ್ಯಸ್ಥ ರಾಜೇಶ್ ವಿ ಮೆನನ್ ಹೇಳಿದ್ದೇನು?: ''ಆರ್‌ಸಿಬಿ ಫ್ರಾಂಚೈಸಿಯು ತನ್ನ ಬೆಂಬಲಿಗರೊಂದಿಗೆ ಎಷ್ಟು ಪ್ರತಿಧ್ವನಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ನಮ್ಮ ಅಭಿಮಾನಿಗಳು ನಮ್ಮ ಪ್ರಮುಖ ಮೌಲ್ಯಗಳ ಬಗ್ಗೆ ಆಳವಾಗಿ ಕಾಳಜಿ ವಹಿಸುತ್ತಾರೆ ಮತ್ತು ವೈಯಕ್ತಿಕವಾಗಿ ಸಂಪರ್ಕ ಹೊಂದಿರುತ್ತಾರೆ. ಅವರ ಬೆಂಬಲವು ನಿಜವಾಗಿಯೂ ನಮ್ಮನ್ನು ಪ್ರೇರೇಪಿಸುತ್ತದೆ. ಮತ್ತು ನಾವು ಮಾಡುವ ಎಲ್ಲ ಕೆಲಸದ ಮೂಲಕವೂ ಅಭಿಮಾನಿಗಳನ್ನು ಹೃದಯದಲ್ಲಿರಿಸಿಕೊಳ್ಳುವುದಕ್ಕೆ ನಾವು ಬದ್ಧರಾಗಿದ್ದೇವೆ. ಇಡೀ ದೇಶದಲ್ಲಿರುವ ತನ್ನ ಅಭಿಮಾನಿಗಳನ್ನ ರೋಮಾಂಚನಗೊಳಿಸಲು ಬೆಂಗಳೂರಿನಲ್ಲಿ ಜನಿಸಿದ ಆರ್‌ಸಿಬಿಯ ಯೋಜನೆಯನ್ನ ಅಭಿಮಾನಿಗಳು ಅಪ್ಪಿಕೊಳ್ಳುವ ವಿಶ್ವಾಸ ನಮಗಿದೆ'' ಎಂದಿದ್ದಾರೆ.
ನಮ್ಮ ಅಭಿಮಾನಿಗಳ ಬಳಗ ಬೆಳೆಯುತ್ತಾ ಮತ್ತು ವಿಕಸನಗೊಳ್ಳುತ್ತಿರುವಂತೆ, ನಾವು ಪ್ರಾದೇಶಿಕ ಕಂಟೆಂಟ್‌ಗಳ ಜೊತೆಗೆ ಬಹುಭಾಷಾ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಅಭಿಮಾನಿಗಳ ವೈವಿಧ್ಯತೆ ಸ್ವೀಕರಿಸಲು ಮತ್ತು ಆಚರಿಸಲು ಯೋಜಿಸಿದ್ದೇವೆ. ಸುಧಾರಿತ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರತಿ ವರ್ಷ ರಚಿಸಲಾದ 1,000ಕ್ಕೂ ಹೆಚ್ಚು ಕಂಟೆಂಟ್ ವಿಡಿಯೋಗಳನ್ನು ವಿವಿಧ ಭಾರತೀಯ ಭಾಷೆಗಳಿಗೆ ಡಬ್ ಮಾಡಲು ಯೋಜಿಸಿದ್ದೇವೆ. ಡಬ್ ಮಾಡಲಾದ ವಿಷಯವು ಕ್ರಿಕೆಟಿಗರು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡುತ್ತಿರುವಂತೆ ಸಹಜವಾಗಿರಲಿದೆ. 2025ರಲ್ಲಿ ಹಿಂದಿ, ತೆಲುಗು ಮತ್ತು 2026ರಲ್ಲಿ ಮಲಯಾಳಂ, ಪಂಜಾಬಿ ಮತ್ತು ಬಂಗಾಳಿಗಳಲ್ಲಿ ಆರ್‌ಸಿಬಿಯು ಬಹುಭಾಷಾ ವಿಸ್ತರಣಾ ಯೋಜನೆಗಳನ್ನ ಹೊಂದಿದೆ. ಭಾರತದಲ್ಲಿ ಮತ್ತು ಜಾಗತಿಕವಾಗಿ ಅತಿ ದೊಡ್ಡ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ಎಲ್ಲಾ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ವಿವಿಧ ಪ್ರದೇಶಗಳಲ್ಲಿ ಕ್ರಿಕೆಟ್‌ನೊಂದಿಗೆ ಅವರ ಪ್ರೀತಿಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡಲಿದೆ ಫ್ರಾಂಚೈಸಿ ತಿಳಿಸಿದೆ.
ಇದನ್ನೂ ಓದಿ : IPL ಆರಂಭಕ್ಕೂ ಮುನ್ನವೇ ವಿವಾದಕ್ಕೆ ಸಿಲುಕಿದ RCB: ಅಭಿಮಾನಿಗಳ ಆಕ್ರೋಶ