ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಲ್ಕು ವಿಕೆಟ್‌ಗಳಿಂದ ಗುಜರಾತ್ ಟೈಟಾನ್ಸ್ (ಜಿಟಿ) ಅನ್ನು ಮಣಿಸಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ 8 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತಲುಪಿದ್ದು, ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮತ್ತೊಂದೆಡೆ, ಗುಜರಾತ್ ಟೂರ್ನಿಯಲ್ಲಿ 7ನೇ ಸೋಲು ಕಂಡು ಒಂಭತ್ತನೇ ಸ್ಥಾನ ತಲುಪಿದೆ.
ಶನಿವಾರ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಗುಜರಾತ್, ತಂಡದ ಆಟಗಾರರಾದ ಶಾರುಖ್ ಖಾನ್ (37), ಮಿಲ್ಲರ್ (30), ರಾಹುಲ್ ತೆವಾಟಿಯಾ (35) ಬ್ಯಾಟಿಂಗ್ ನೆರವಿನಿಂದ 19.3 ಓವರ್‌ಗಳಲ್ಲಿ 147 ರನ್ಗಳಿಗೆ ಸರ್ವಪತನ ಕಂಡಿತು. ಈ ಸಾಧಾರಣ ಗುರಿ ಬೆನ್ನತ್ತಿದ ಆರ್‌ಸಿಬಿ 13.4 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಕೊಹ್ಲಿ-ಫಾಫ್ ಸ್ಫೋಟಕ ಆರಂಭ: ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಸ್ಫೋಟಕ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 92 ರನ್‌ಗಳ ಜೊತೆಯಾಟವಾಡಿದರು. ಫಾಪ್ 23 ಎಸೆತಗಳಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಮೇತ 64 ರನ್ ಬಾರಿಸಿ ತಂಡದ ಗೆಲುವನ್ನು ಸುಲಭಗೊಳಿಸಿ ಪೆವಿಲಿಯನ್ ಸೇರಿದರು.
ಆರ್‌ಸಿಬಿ ಬ್ಯಾಟಿಂಗ್ ಅಬ್ಬರ 10 ಓವರ್‌ಗಳಲ್ಲಿ ಪಂದ್ಯ ಮುಕ್ತಾಯವಾಗುವ ಸೂಚನೆ ಕಂಡುಬಂದಿತ್ತು. ಆದರೆ ಫಾಪ್ ನಿರ್ಗಮದ ಬಳಿಕ ತಂಡ ದಿಢೀರ್ ಕುಸಿತ ಕಂಡಿತು. ಸ್ಕೋರ್ 117ಕ್ಕೆ ತಲುಪುವಷ್ಟರಲ್ಲೇ ಐದು ವಿಕೆಟ್ ಉರುಳಿದವು. ವಿಲ್ ಜಾಕ್ಸ್ (1), ರಜತ್ ಪಾಟಿದಾರ್ (2), ಗ್ಲೆನ್ ಮ್ಯಾಕ್ಸ್ವೆಲ್ (4), ಗ್ರೀನ್ (1) ಪೆವಿಲಿಯನ್ ಪರೇಡ್ ಮಾಡಿದರು. ಮತ್ತೊಂದೆಡೆ, ಆರಂಭಿಕವಾಗಿ ಕ್ರೀಸ್ಗಿಳಿದಿದ್ದ ಕೊಹ್ಲಿ 27 ಎಸೆತಗಳಲ್ಲಿ 42 ರನ್ ಗಳಿಸಿ ಪೆವಿಲಿಯನ್ಗೆ ಮರಳಿದ್ದರಿಂದ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಈ ವೇಳೆ ಕಾರ್ತಿಕ್ (21*) ಮತ್ತು ಸ್ವಪ್ನೀಲ್ ಸಿಂಗ್ (15*) ಸಮಯೋಚಿತ ಪ್ರದರ್ಶನ ತೋರಿ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿ ವಿಜಯ ಪತಾಕೆ ಹಾರಿಸಿದರು. ಗುಜರಾತ್ ಪರ ಲಿಟ್ಲ್ 4, ನೂರ್ ಅಹ್ಮದ್ 2 ವಿಕೆಟ್ ಪಡೆದರು.
ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ:ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ರನ್ ರೇಟ್ನಲ್ಲೂ ಸುಧಾರಣೆ ಕಂಡಿರುವ ಆರ್‌ಸಿಬಿ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತಲುಪಿದೆ. ಮುಂದಿನ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದರೆ 12 ಅಂಕಗಳನ್ನು ಕಲೆ ಹಾಕಲಿದೆ. ಅಂಕಪಟ್ಟಿಯ ಮೇಲಿನ ತಂಡಗಳು ಸೋಲನುಭವಿಸಿ ಆರ್‌ಸಿಬಿ ಪರ ಫಲಿತಾಂಶ ಬಂದದ್ದೇ ಆದಲ್ಲಿ ಪ್ಲೇ ಆಫ್ಗೇರುವ ಅದೃಷ್ಟ ಒಲಿಯಲಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ IPL ತಂಡಗಳ ಪ್ರಾತಿನಿಧ್ಯವೆಷ್ಟು? - T20 World Cup 2024