ಜೈಪುರ:ಡೆಲ್ಲಿ ಸಂಘಟಿತ ಬೌಲಿಂಗ್ ದಾಳಿಗೆ ನಡುಗಿದ ರಾಜಸ್ಥಾನಕ್ಕೆ ಆಸರೆಯಾದ ರಿಯಾನ್ ಪರಾಗ್ ಅವರ 84 ರನ್ಗಳ ಬಲದಿಂದ ತಂಡ 186 ರನ್ಗಳ ಗುರಿ ನೀಡಿದೆ. ಮಾಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಅಬ್ಬರಿಸಿ ಅರ್ಧಶತಕ ಗಳಿಸಿದರೂ ಉಳಿದ ಬ್ಯಾಟರ್ಗಳು ತಂಡಕ್ಕೆ ಉತ್ತಮ ಅಡಿಪಾಯ ಹಾಕುವಲ್ಲಿ ಎಡವಿದರು. ಹೀಗಾಗಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ರಾಜಸ್ಥಾನ ತಂಡ 185 ರನ್ಗಳನ್ನು ಪೇರಿಸಿತು.
ಡೆಲ್ಲಿ ನಾಯಕ ರಿಷಭ್ ಪಂತ್ ಆಹ್ವಾನದ ಮೇರೆಗೆ ಬ್ಯಾಟಿಂಗ್ಗೆ ಬಂದ ರಾಜಸ್ಥಾನ ತಂಡ ಆರಂಭದಲ್ಲೇ ಮರ್ಮಾಘಾತಕ್ಕೊಳಗಾಯಿತು. ಭರವಸೆಯ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ತಂಡಕ್ಕೆ ಆಸರೆಯಾಗಲಿಲ್ಲ. ಆಂಗ್ಲ ಬ್ಯಾಟರ್ ಜೋಸ್ ಬಟ್ಲರ್ ಕೂಡ ಹೆಚ್ಚು ಹೊತ್ತು ನಿಲ್ಲಿಲ್ಲ. ಬಳಿಕ ಬಂದ ರಾಜಸ್ಥಾನ ತಂಡದ ನಾಯಕ ಸಂಜು ಸಾಮನ್ಸ್ 15 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ತಂಡದ ಮೊತ್ತ 36 ರನ್ ಆಗುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಒಂದಾದ ರಿಯಾನ್ ಪರಾಗ್ ಮತ್ತು ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ ತಾಳ್ಮೆಯುಕ್ತ ಆಟವಾಡುವ ಮೂಲಕ ಕುಸಿದ ರಾಜಸ್ಥಾನವನ್ನು ಮೇಲೆತ್ತಿದರು. 54 ರನ್ಗಳ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಆಸರೆಯಾಯಿತು. ಮೂರು ಸಿಕ್ಸರ್ ಹೊಡೆದ ಆಶ್ವಿನ್ 29 ರನ್ಗಳಿಗೆ ಔಟ್ ಆದರು. ನಂತರ ಕ್ರೀಸ್ಗೆ ಬಂದ ಧ್ರುವ್ ಜುರೆಲ್ ರಿಯಾನ್ ಪರಾಗ್ಗೆ ಸಾಥ್ ನೀಡಿದರು.