ಚೆನ್ನೈ(ತಮಿಳುನಾಡು):ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ಗೆ ವೇದಿಕೆ ಸಜ್ಜಾಗಿದೆ. ಇಂದು (ಭಾನುವಾರ) ಸಂಜೆ 7.30ಕ್ಕೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಇತ್ತಂಡಗಳು ಮಾಜಿ ಚಾಂಪಿಯನ್ಗಳಾಗಿದ್ದು, ಈ ಬಾರಿಯ ಪ್ರಶಸ್ತಿ ಯಾರ ಪಾಲಾಗಲಿದೆ ಎಂಬುದು ಕುತೂಹಲದ ಸಂಗತಿಯಾಗಿದೆ.
ಟೂರ್ನಿಯುದ್ದಕ್ಕೂ ಪ್ರಾಬಲ್ಯ ಮೆರೆದು ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದ್ದ ಕೆಕೆಆರ್ ಮೂರನೇ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಮೊದಲ ಕ್ವಾಲಿಫೈಯರ್ನಲ್ಲಿ ಕೆಕೆಆರ್ ವಿರುದ್ಧ ಸೋತಿದ್ದ ಸನ್ರೈಸರ್ಸ್ ಹೈದರಾಬಾದ್ ಎರಡನೇ ಕ್ವಾಲಿಫೈಯರ್ನಲ್ಲಿ ರಾಜಸ್ಥಾನ ರಾಯಲ್ಸ್ ಸೋಲಿಸಿ ಫೈನಲ್ ತಲುಪಿದೆ. ಕೆಕೆಆರ್ ವಿರುದ್ಧ ಮುಯ್ಯಿ ತೀರಿಸಿಕೊಳ್ಳುವ ಮೂಲಕ 2ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಲು ಸನ್ ಪಡೆ ತಂತ್ರ ರೂಪಿಸಿದೆ.
ಕೆಕೆಆರ್ ಬಲಾಬಲ:ಇತ್ತಂಡಗಳು ಟೂರ್ನಿಯಲ್ಲಿ ಬಲಿಷ್ಠವಾಗಿದ್ದು, ಹೋಲಿಕೆಯಲ್ಲಿ ಕೆಕೆಆರ್ ತುಸು ಮುಂದಿದೆ. ಸರ್ವಾಂಗೀಣ ಪ್ರದರ್ಶನ ನೀಡುತ್ತಾ ಬಂದಿರುವ ಶ್ರೇಯರ್ ಅಯ್ಯರ್ ನೇತೃತ್ವದ ಪಡೆ ಯಾವುದರಲ್ಲಿ ಕಮ್ಮಿ ಇಲ್ಲ ಎಂಬಂತೆ ಆಡಿದೆ. ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ನಾಯಕ ಶ್ರೇಯಸ್ ಬ್ಯಾಟಿಂಗ್ ಮಿಂಚುತ್ತಿದ್ದಾರೆ. ಆ್ಯಂಡ್ರೆ ರಸೆಲ್ ಆಲ್ರೌಂಡರ್ ಪ್ರದರ್ಶನ ತಂಡದ ಪ್ಲಸ್ ಪಾಯಿಂಟ್. ವರುಣ್ ಚಕ್ರವರ್ತಿ ಸ್ಪಿನ್ ಜಾದು ಮಾಡಿದೆ. ಯುವ ವೇಗಿಗಳಾದ ಹರ್ಷಿತ್ ರಾಣಾ, ವೈಭವ್ ಅರೋರಾ ನಿರೀಕ್ಷೆ ಹುಟ್ಟಿಸಿದ್ದಾರೆ. ₹24 ಕೋಟಿಯ ಒಡೆಯ ಮಿಚೆಲ್ ಸ್ಟಾರ್ಕ್ ನಿರ್ಣಾಯಕ ಘಟ್ಟದಲ್ಲಿ ಲಯ ಕಂಡುಕೊಂಡಿದ್ದು ತಂಡಕ್ಕೆ ಬಲ ಹೆಚ್ಚಿಸಿದೆ.
ಎಸ್ಆರ್ಎಚ್ ಶಕ್ತಿ:ಬಿರುಸಾದ ಬ್ಯಾಟಿಂಗ್ನಿಂದಲೇ ಸದ್ದು ಮಾಡಿರುವ ಹೈದರಾಬಾದ್, ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸಿನ್ ತಂಡದ ಟ್ರಂಪ್ಕಾರ್ಡ್. ನಿತೀಶ್ ರೆಡ್ಡಿ ಆಲ್ರೌಂಡ್ ವಿಭಾಗದಲ್ಲಿ ನಂಬಿಕೆ ಉಳಿಸಿಕೊಂಡಿದ್ದಾರೆ. ಬೌಲಿಂಗ್ನಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಜೊತೆಗೆ ನಟರಾಜ್, ಭುವನೇಶ್ವರ್ ಕುಮಾರ್ ಇದ್ದರೆ, ಕಳೆದ ಪಂದ್ಯದಲ್ಲಿ ಸ್ಪಿನ್ ಮೋಡಿ ಮಾಡಿರುವ ಶಹಬಾಜ್ ಅಹ್ಮದ್ ಫೈನಲ್ನಲ್ಲಿ ಮಿಂಚುವ ಹಂಬಲ ಹೊಂದಿದ್ದಾರೆ.
ಗಂಭೀರ್ v/s ಕಮಿನ್ಸ್:ಫೈನಲ್ ಹೋರಾಟ ಕೆಲ ವಿಶೇಷಗಳಿಗೆ ಕಾರಣವಾಗಲಿದೆ. ಸದ್ಯ ಕೆಕೆಆರ್ ಮೆಂಟರ್ ಆಗಿರುವ ಗೌತಮ್ ಗಂಭೀರ್ ತಂಡದ ಮಾಜಿ ನಾಯಕರೂ ಹೌದು. 2 ಬಾರಿ (2012, 2014) ಫ್ರಾಂಚೈಸಿಗೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಈ ಬಾರಿ ಡಕೌಟ್ನಲ್ಲಿ ತಂತ್ರಗಾರ. ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮಾಜಿ ಕೆಕೆಆರ್ ಆಟಗಾರ. 2014ರಲ್ಲಿ ಟ್ರೋಫಿ ಗೆದ್ದಾಗ ತಂಡದ ಭಾಗವಾಗಿದ್ದರು. ಈ ಬಾರಿ ಸನ್ ಪಡೆಯನ್ನು ಫೈನಲ್ಗೆ ತಂದಿದ್ದಾರೆ. ಆಸೀಸ್ ನಾಯಕನಾಗಿ ಏಕದಿನ ವಿಶ್ವಕಪ್, ಟೆಸ್ಟ್ ಚಾಂಪಿಯನ್ಶಿಪ್ ಗೆದ್ದಿರುವ ಕಮಿನ್ಸ್ ಐಪಿಎಲ್ ಟ್ರೋಫಿ ಗೆಲ್ಲುವ ಗುರಿ ಹೊಂದಿದ್ದಾರೆ.