ಕೋಲ್ಕತ್ತಾ: ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್‌ಗಳಿಂದ ಮಣಿಸಿದ ಕೋಲ್ಕತ್ತಾ ನೈಟ್‌ರೈಡರ್ಸ್ ಅಧಿಕೃತವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪ್ಲೇ ಆಫ್ ಘಟ್ಟ ತಲುಪಿತು.
ಮಳೆ ಸುರಿದಿದ್ದರಿಂದ ಪಂದ್ಯವನ್ನು ತಲಾ 16 ಓವರ್‌ಗಳಿಗೆ ಸೀಮಿತಗೊಳಿಸಿ ತಡವಾಗಿ ಆರಂಭಿಸಲಾಗಿತ್ತು. ಟಾಸ್ ಗೆದ್ದ ಮುಂಬೈ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ 7 ವಿಕೆಟ್ ಕಳೆದುಕೊಂಡು 157 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಮುಂಬೈ 8 ವಿಕೆಟ್ ಕಳೆದುಕೊಂಡು 139 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಕೋಲ್ಕತ್ತಾ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ (2/17), ಸುನಿಲ್ ನರೈನ್ (1/21) ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಮುಂಬೈ ಪರವಾಗಿ ಇಶಾನ್ ಕಿಶನ್ 22 ಎಸೆತಗಳನ್ನು ಎದುರಿಸಿ 40 ರನ್ ಪೇರಿಸಿದರು. ಇವರನ್ನು ಹೊರತುಪಡಿಸಿ ತಿಲಕ್ ವರ್ಮಾ17 ಎಸೆತಗಳಲ್ಲಿ 32 ರನ್ ಬಾರಿಸಿದರು. ಆದರೆ ಇಬ್ಬರಿಗೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಇದಕ್ಕೂ ಮುನ್ನ ಕೋಲ್ಕತ್ತಾ ಬ್ಯಾಟಿಂಗ್‌ನಲ್ಲಿ ಪ್ರಮುಖವಾಗಿ ವೆಂಕಟೇಶ್ ಅಯ್ಯರ್ 21 ಎಸೆತಗಳಲ್ಲಿ 42 ರನ್ ಪೇರಿಸಿ ತಂಡದ ಟಾಪ್ ಸ್ಕೋರರ್ ಎನಿಸಿದರು. ಇನ್ನುಳಿದಂತೆ, ರಿಂಕು ಸಿಂಗ್ 12 ಎಸೆತಗಳಲ್ಲಿ 20 ರನ್, ಆ್ಯಂಡ್ರೆ ರಸೆಲ್ 14 ಎಸೆತಗಳಲ್ಲಿ 24 ರನ್ ಹಾಗು ನಿತಿಶ್ ರಾಣಾ 23 ಎಸೆತಗಳಲ್ಲಿ 33 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು. ಈ ಮೂಲಕ ತಂಡ 150 ರನ್ ಗಡಿ ದಾಟಲು ಸಾಧ್ಯವಾಯಿತು.