ನವದೆಹಲಿ:ಐಪಿಎಲ್ 2024ರ 36ನೇ ಪಂದ್ಯ ಇಂದು ಮಧ್ಯಾಹ್ನ ಕೆಕೆಆರ್ ಮತ್ತು ಆರ್ಸಿಬಿ ನಡುವೆ ನಡೆಯಲಿದೆ. ಪ್ರಸಕ್ತ ಋತುವಿನಲ್ಲಿ ಸತತ ಸೋಲು ಅನುಭವಿಸಿರುವ ಆರ್ಸಿಬಿ ತಂಡಕ್ಕೆ ಕೋಲ್ಕತ್ತಾ ಕಠಿಣ ಸವಾಲಾಗುವ ಸಾಧ್ಯತೆ ಇದೆ. ಆರ್ಸಿಬಿ ಅತ್ಯಂತ ನಿಷ್ಠಾವಂತ ಮತ್ತು ದೊಡ್ಡ ಅಭಿಮಾನಿ ಬಳಗ ಹೊಂದಿದ್ದು ತಂಡ ಅಭಿಮಾನಿಗಳನ್ನು ಪದೇ ಪದೇ ನಿರಾಶೆಗೊಳಿಸುತ್ತಿದೆ.
ಆರ್ಸಿಬಿ ಇಲ್ಲಿಯವರೆಗೆ 7 ಪಂದ್ಯಗಳನ್ನಾಡಿದ್ದು, ಈ ಪೈಕಿ ಕೇವಲ ಒಂದು ಪಂದ್ಯ ಗೆದ್ದು 6ರಲ್ಲಿ ಸೋತಿದೆ. ಪಂಜಾಬ್ ವಿರುದ್ಧದ ಎರಡನೇ ಪಂದ್ಯದಲ್ಲಿ ಬೆಂಗಳೂರು ಗೆದ್ದಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ಆಡಿರುವ 6 ಪಂದ್ಯಗಳಲ್ಲಿ 4 ಗೆದ್ದಿದೆ. ಎರಡು ಪಂದ್ಯಗಳಲ್ಲಿ ಸೋತಿದೆ. ಪಾಯಿಂಟ್ ಪಟ್ಟಿಯಲ್ಲಿ ಕೋಲ್ಕತ್ತಾ ಮೂರನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಹತ್ತನೇ ಸ್ಥಾನದಲ್ಲಿದೆ.
ಆರ್ಸಿಬಿ ದೌರ್ಬಲ್ಯ: ಆರ್ಸಿಬಿ ತಂಡದ ಬೌಲಿಂಗ್ ನಿರಾಶಾದಾಯಕವಾಗಿದೆ. ಇನ್ನು, ವಿರಾಟ್ ಕೊಹ್ಲಿಯನ್ನು ಬಿಟ್ಟರೆ ಬ್ಯಾಟರ್ಗಳೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ತಂಡವು ಕೊಹ್ಲಿ ಬಲದ ಮೇಲೆ ಮಾತ್ರ ಆಡುತ್ತಿದೆ ಎಂದು ತೋರುತ್ತದೆ. ಬೌಲಿಂಗ್ ಮಾತ್ರವಲ್ಲದೆ ಬ್ಯಾಟರ್ಗಳೂ ಕೂಡ ವಿಶೇಷ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ.
ಕೆಕೆಆರ್ ಬಲ: ಕೋಲ್ಕತ್ತಾ ಅದ್ಭುತ ಪ್ರದರ್ಶನ ನೀಡುತ್ತಿದೆ. ಸುನಿಲ್ ನರೈನ್ ರಾಜಸ್ಥಾನ ವಿರುದ್ಧವೂ ಶತಕ ಬಾರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಬೌಲಿಂಗ್ನಲ್ಲಿ ಹರ್ಷಿತ್ ರಾಣಾ ಮತ್ತು ನರೈನ್ ಅವರ ಪ್ರದರ್ಶನ ಉತ್ತಮವಾಗಿದೆ. ತಂಡಕ್ಕೆ ಒಬ್ಬ ಅಥವಾ ಇನ್ನೊಬ್ಬ ಆಟಗಾರನ ಅಗತ್ಯವಿರುವಾಗ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಕೆಕೆಆರ್ ವಿರುದ್ಧ 19 ಬಾರಿ ಆರ್ಸಿಬಿ ಮೇಲುಗೈ: ಉಭಯ ತಂಡಗಳ ನಡುವೆ ನಡೆದ ಐಪಿಎಲ್ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೆಕೆಆರ್ ವಿರುದ್ಧ ಮೇಲುಗೈ ಸಾಧಿಸಿದೆ. ಇತ್ತಂಡಗಳ ನಡುವೆ ನಡೆದ 33 ಪಂದ್ಯಗಳಲ್ಲಿ ಆರ್ಸಿಬಿ 19 ಮತ್ತು ಕೋಲ್ಕತ್ತಾ 13ರಲ್ಲಿ ಜಯ ಸಾಧಿಸಿದೆ. ಎರಡು ತಂಡಗಳ ನಡುವೆ ಈಡನ್ ಗಾರ್ಡನ್ನಲ್ಲಿ ಒಟ್ಟು 11 ಪಂದ್ಯಗಳು ನಡೆದಿದ್ದು, ಇದರಲ್ಲಿ ಕೋಲ್ಕತ್ತಾ 7 ಪಂದ್ಯಗಳನ್ನು ಗೆದ್ದಿದೆ ಮತ್ತು ಆರ್ಸಿಬಿ 4 ಪಂದ್ಯಗಳನ್ನು ಜಯಗಳಿಸಿದೆ.
ಇಂದಿನ ಪಂದ್ಯ 2: ಪಂಜಾಬ್ ಕಿಂಗ್ಸ್ Vs ಗುಜರಾತ್ ಟೈಟಾನ್ಸ್:ಐಪಿಎಲ್ನ 37ನೇ ಪಂದ್ಯದಲ್ಲಿ ಇಂದು ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಪಂಜಾಬ್ನ ಮಹಾರಾಜ ಯದ್ವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ 7:30ಕ್ಕೆ ಆರಂಭವಾಗಲಿದೆ. ಪಂಜಾಬ್ ತಂಡ ತನ್ನ ತವರು ಮೈದಾನದ ಲಾಭ ಪಡೆಯಲು ಉತ್ಸುಕವಾಗಿದೆ. ಆದರೆ, ಗುಜರಾತ್ ಕಳೆದ ಪಂದ್ಯದಲ್ಲಿ ಅನುಭವಿಸಿದ ಸೋಲು ಮರೆತು ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸಲು ತಂತ್ರ ಹೆಣೆದಂತೆ ಕಾಣಿಸುತ್ತಿದೆ.
ಈ ಋತುವಿನಲ್ಲಿ PBKS & GT ಪ್ರದರ್ಶನ: ಪಿಬಿಕೆಎಸ್ ಮತ್ತು ಜಿಟಿ ಪ್ರದರ್ಶನ ಏರಿಳಿತಗಳಿಂದ ಕೂಡಿದೆ. ಜಿಟಿ 7 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಶುಭಮನ್ ಗಿಲ್ ಬಳಗ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಸದ್ಯ ಅಂಕಪಟ್ಟಿಯಲ್ಲಿ ಜಿಟಿ 6 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿ ಮುಂದುವರಿದಿದೆ. ಪಿಬಿಕೆಎಸ್ 7 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು 2 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಪಂಜಾಬ್ 4 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಮುಂದುವರಿದಿದೆ.