ಹೈದರಾಬಾದ್:ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಿಕೆಟ್‌ಕೀಪರ್ - ಬ್ಯಾಟರ್ ಆಗಿರುವ ಜಿತೇಶ್ ಶರ್ಮಾ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಜಿತೇಶ್ ಅವರು ನಾಳಿನ ಪಂದ್ಯದಲ್ಲಿ ಟಾಸ್ ಮಾಡಲು ಬಂದಲ್ಲಿ ಪಂಜಾಬ್ ಕಿಂಗ್ಸ್ನ 16ನೇ ನಾಯಕರಾಗಲಿದ್ದಾರೆ. ಹಿರಿಯ ಕ್ರಿಕೆಟಿಗ ಶಿಖರ್ ಧವನ್ ಮತ್ತು ಸ್ಯಾಮ್ ಕರ್ರನ್ ಅವರ ಅನುಪಸ್ಥಿತಿಯಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಶಿಖರ್ ಧವನ್ ಈಗಾಗಲೇ ಗಾಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಹಂಗಾಮಿ ನಾಯಕರಾಗಿ ಆಯ್ಕೆಯಾಗಿದ್ದ ಸ್ಯಾಮ್ ಕರ್ರನ್ ಪಾಕಿಸ್ತಾನ ವಿರುದ್ಧದ ಟಿ-20 ಸರಣಿಗಾಗಿ ತಾಯ್ನಾಡು ಇಂಗ್ಲೆಂಡ್ಗೆ ಮರಳಿದ್ದಾರೆ. ಹೀಗಾಗಿ ಜಿತೇಶ್ ಶರ್ಮಾ ಲೀಗ್ನ ಅಂತಿಮ ಪಂದ್ಯದಲ್ಲಿ ನಾಯಕತ್ವದ ಹೊಣೆ ಹೊರಲಿದ್ದಾರೆ.
ಈ ಬಗ್ಗೆ ಪಂಜಾಬ್ ಕಿಂಗ್ಸ್ ತಂಡ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಂತಿಮ ಪಂದ್ಯದ ನಾಯಕರಾಗಿ ಜಿತೇಂದ್ರ ಶರ್ಮಾ ಆಯ್ಕೆಯಾಗಿದ್ದಾರೆ. ಎಸ್ಆರ್ಎಚ್ ವಿರುದ್ಧದ ಅಂತಿಮ ಪಂದ್ಯಕ್ಕಾಗಿ ನಮ್ಮ ನಾಯಕ ಸಿದ್ಧರಾಗಿದ್ದಾರೆ ಎಂದು ಪೋಸ್ಟ್ ಮಾಡಲಾಗಿದೆ. ತಮಗೆ ನಾಯಕತ್ವ ಸಿಕ್ಕ ಸಂತೋಷವನ್ನು ಜಿತೇಶ್ ಶರ್ಮಾ ಅವರು ಹಂಚಿಕೊಂಡಿದ್ದು, ಈ ಅವಕಾಶ ಸಿಕ್ಕಿದ್ದು ಸಂತೋಷ ತಂದಿದೆ. ಈ ಐಪಿಎಲ್ ಋತುವನ್ನು ಗೆಲುವಿನೊಂದಿಗೆ ಮುಗಿಸಲು ಪ್ರಯತ್ನಿಸಲಾಗುವುದು. ತಂಡದ ಗೆಲುವಿಗಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.