ಬೆಂಗಳೂರು:ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆ ಇದೆ. ಬ್ಯಾಟಿಂಗ್ನಲ್ಲಿ ಮೊನಚು ಕಳೆದುಕೊಂಡಿರುವ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಐಪಿಎಲ್ನಿಂದ ಅನಿರ್ದಿಷ್ಟ ಅವಧಿಗೆ ಬಿಡುವು ಕೋರಿದ್ದಾರೆ.
ತೀವ್ರ ವೈಫಲ್ಯ ಅನುಭವಿಸುತ್ತಿರುವ ಆಟಗಾರನನ್ನು ಸನ್ರೈಸರ್ಸ್ ಹೈದರಾಬಾದ್ ಪಂದ್ಯದಿಂದ ಕೈಬಿಡಲಾಗಿತ್ತು. ಇದಕ್ಕೂ ಮೊದಲು ಅವರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಕೋಚ್ ಆ್ಯಂಡಿ ಫ್ಲವರ್ ಅವರ ಜೊತೆ ಮಾತುಕತೆ ನಡೆಸಿದ್ದರು. ತಾನು ಮಾನಸಿಕ ಮತ್ತು ದೈಹಿಕವಾಗಿ ಫಿಟ್ ಆಗಿಲ್ಲದ ಕಾರಣ ಪಂದ್ಯದಿಂದ ಹೊರಗುಳಿಯುವುದಾಗಿ ಅಭಿಪ್ರಾಯ ತಿಳಿಸಿದ್ದರು.
ಕೆಲ ಪಂದ್ಯಗಳಿಂದ ಹೊರಕ್ಕೆ?:ಕಳಪೆ ಫಾರ್ಮ್ನಿಂದಾಗಿ ಟೀಕೆಗೆ ಗುರಿಯಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ಮಾನಸಿಕ ಮತ್ತು ದೈಹಿಕವಾಗಿ ಚೇತರಿಸಿಕೊಳ್ಳಲು ಐಪಿಎಲ್ನಿಂದ ಕೆಲಕಾಲ ಬಿಡುವು ಪಡೆಯಲು ನಿರ್ಧರಿಸಿದ್ದಾರೆ. ಹೀಗಾಗಿ ತಮ್ಮನ್ನು ತಂಡದಿಂದ ಕೈಬಿಡಿ ಎಂದು ತಾವೇ ಕೋರಿದ್ದಾರೆ.
ಆಸ್ಟ್ರೇಲಿಯಾದ ಸಿಡಿಲಮರಿ, ಸದ್ಯ ಐಪಿಎಲ್ನಲ್ಲಿ ಮಂಕಾಗಿದ್ದಾರೆ. ಆಡಿರುವ 6 ಪಂದ್ಯಗಳಲ್ಲಿ ಕೇವಲ 28 ರನ್ ಮಾತ್ರ ಗಳಿಸಿದ್ದಾರೆ. ಇದರಲ್ಲಿ ಮೂರು ಬಾರಿ ಸೊನ್ನೆ ಸುತ್ತಿದ್ದಾರೆ. ಬೌಲಿಂಗ್ನಲ್ಲೂ ಅವರ ಕಮಾಲ್ ಮಾಡಿಲ್ಲ. ಇದು ಮಾನಸಿಕವಾಗಿ ಅವರನ್ನು ಕುಗ್ಗಿಸಿದೆ. ತನ್ನ ತಪ್ಪುಗಳನ್ನು ತಿದ್ದಿಕೊಂಡು ಹೊಸ ಚೈತನ್ಯದೊಂದಿಗೆ ತಂಡಕ್ಕೆ ಮರಳಲು ತಾವು ಬಯಸಿದ್ದು, ಅನಿರ್ದಿಷ್ಟ ಅವಧಿಗೆ ತಮ್ಮನ್ನು ತಂಡದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.