ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಮೂರನೇ ದಿನವಾದ ಶನಿವಾರ ಭಾರತದ ಮಹಿಳಾ ಶೂಟರ್ ರುಬಿನಾ ಫ್ರಾನ್ಸಿಸ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಖಾತೆಗೆ 5ನೇ ಪದಕ ಸೇರ್ಪಡೆಗೊಂಡಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ SH1 ಪಂದ್ಯದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಫೈನಲ್ ಹಣಾಹಣಿಯಲ್ಲಿ ರುಬಿನಾ ಫ್ರಾನ್ಸಿಸ್ 211.1 ಅಂಕ ಗಳಿಸಿದರು. ಇರಾನ್ನ ಜವನ್ಮಾರ್ದಿ ಸರೆಹ್ ಚಿನ್ನ ಮತ್ತು ಟರ್ಕಿಯ್ ಓಜ್ಗನ್ ಐಸೆಲ್ ಬೆಳ್ಳಿ ಪದಕ ಜಯಿಸಿದರು. ಸರೆಹ್ 236.8 ಅಂಕ ಗಳಿಸಿದರೇ, ಐಸೆಲ್ 231.1 ಅಂಕಗಳನ್ನು ಪಡೆದರು.
ಮಧ್ಯಪ್ರದೇಶದವರಾದ ರುಬಿನಾ ಪ್ಯಾರಾ ಸ್ಟೋರ್ಟ್ ವಿಶ್ವಕಪ್-2023ರಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2017ರಲ್ಲಿ ಬ್ಯಾಂಕಾಕ್ನಲ್ಲಿ ನಡೆದ ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ಸ್ ಚಾಮಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದರು. 2019ರ ಕ್ರೋಯೇಷಿಯಾದಲ್ಲಿ ನಡೆದ ವಿಶ್ವ ಪ್ಯಾರಾ ಚಾಂಪಿಯನ್ಸ್ಶಿಪ್ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.