ನವದೆಹಲಿ: ಭಾರತದ ಶ್ರೀಮಂತ ಕ್ರಿಕೆಟಿಗರು ಯಾರು ಎಂದು ಕೇಳಿದರೆ, ತಕ್ಷಣಕ್ಕೆ ನೆನಪಿಗೆ ಬರುವ ಹೆಸರುಗಳೆಂದರೆ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ. ಆದರೆ ಇವರು ಮಾತ್ರವಲ್ಲ. 22ನೇ ವಯಸ್ಸಿಗೆ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಈ ಕ್ರಿಕೆಟರ್ ವಿಶ್ವದ ಎಲ್ಲಾ ಕ್ರಿಕೆಟರ್ಗಳಿಗಿಂತಲೂ ಸಿರಿವಂತ.
ಇವರು ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯ ಪ್ರದೇಶ ತಂಡದ ಪರ ಆಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9 ಪಂದ್ಯ ಮತ್ತು ಲಿಸ್ಟ್-ಎನಲ್ಲಿ 4 ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆಯಲ್ಲಿ 1 ಶತಕಸಮೇತ 414 ರನ್ ಗಳಿಸಿದ್ದರು. ಇವರ ಗರಿಷ್ಠ ಸ್ಕೋರ್ 103. ಇದಷ್ಟೇ ಅಲ್ಲ, ಐಪಿಎಲ್ನಲ್ಲಿ ಎರಡು ವರ್ಷ ರಾಜಸ್ಥಾನ ರಾಯಲ್ಸ್ ಪರ ಆಡಿದ್ದಾರೆ. ಆದರೆ ಅಂತಿಮ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಬಳಿಕ ಕ್ರಿಕೆಟ್ನಿಂದ ದೂರವಾಗಿದ್ದರು.
ನಾವು ಹೇಳುತ್ತಿರುವುದು ಭಾರತದ ಯುವ ಕ್ರಿಕೆಟರ್ ಮತ್ತು ಉದ್ಯಮಿ ಆರ್ಯಮಾನ್ ಬಿರ್ಲಾ ಅವರ ಕುರಿತು. ವಿಶ್ವದ ಶ್ರೀಮಂತ ಕ್ರಿಕೆಟರ್ ಆಗಿರುವ ಇವರು ತನ್ನ ನೆಚ್ಚಿನ ಕ್ರೀಡೆಗೆ 22ನೇ ವಯಸ್ಸಿನಲ್ಲೇ ವಿದಾಯ ಘೋಷಿಸಿದ್ದರು. ಆರ್ಯಮಾನ್ ಬಿರ್ಲಾ ಅವರ ಆಸ್ತಿ ಮೌಲ್ಯ 70 ಸಾವಿರ ಕೋಟಿ ರೂಪಾಯಿ.
ಕುಮಾರ ಮಂಗಳಂ ಬಿರ್ಲಾ ಅವರ ಪುತ್ರ:ಆರ್ಯಮನ್ ಬಿರ್ಲಾ ಭಾರತದ ಹಿರಿಯ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರರಾಗಿದ್ದಾರೆ. ಕುಮಾರ್ ಮಂಗಳಂ ಬಿರ್ಲಾ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಆರ್ಯಮನ್ ಬಿರ್ಲಾ 1997ರಲ್ಲಿ ಜನಿಸಿದ್ದರು. ಬಾಲ್ಯದಿಂದಲೇ ಕ್ರಿಕೆಟ್ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದರು. 2017ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ಬ್ಯಾಟಿಂಗ್ ಪ್ರತಿಭೆಯಿಂದ ಉತ್ತಮ ಕ್ರಿಕೆಟಿಗರಾಗಿ ಗುರುತಿಸಿಕೊಂಡಿದ್ದರು. 2019ರಲ್ಲಿ ಗಾಯಗಳಿಂದಾಗಿ ಕ್ರಿಕೆಟ್‌ಗೆ ವಿದಾಯ ಹೇಳಬೇಕಾಯಿತು.
ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಆರ್ಯಮಾನ್ ವ್ಯಾಪಾರ ಕ್ಷೇತ್ರವನ್ನು ಆಯ್ದುಕೊಂಡರು. ಮುಂದೆ, ಆದಿತ್ಯ ಬಿರ್ಲಾ ಮ್ಯಾನೇಜ್‌ಮೆಂಟ್ ಕಾರ್ಪೊರೇಷನ್ ಗ್ರಾಸಿಮ್ ಇಂಡಸ್ಟ್ರೀಸ್‌ನ ನಿರ್ದೇಶಕರಾದರು. ಇದಲ್ಲದೇ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್‌ನ ನಿರ್ದೇಶಕರೂ ಆದರು. ಇವರ ನಿವ್ವಳ ಆಸ್ತಿ 70 ಸಾವಿರ ಕೋಟಿ ರೂ.ಗೂ ಅಧಿಕ ಎಂಬುದು ಗಮನಾರ್ಹ.
ಇವರನ್ನು ಹೊರತುಪಡಿಸಿದರೆ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ (₹1,100 ಕೋಟಿ), ವಿರಾಟ್ ಕೊಹ್ಲಿ (₹900 ಕೋಟಿ), ಧೋನಿ (₹800 ಕೋಟಿ) ಇತರೆ ಶ್ರೀಮಂತ ಕ್ರಿಕೆಟರ್‌ಗಳಾಗಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಕುಡಿಯುವ Black Water ಎಷ್ಟು ದುಬಾರಿ ಗೊತ್ತಾ: ಬೆಲೆ ಕೇಳಿದ್ರೆ ಬೆರಗಾಗ್ತೀರ!