ಮಸ್ಕತ್ (ಓಮನ್):ಎಫ್‌ಐಎಚ್ ಹಾಕಿ5 ಮಹಿಳಾ ವಿಶ್ವಕಪ್ 2024ರ (FIH Hockey5s Women’s World Cup 2024) ಸೆಮಿಫೈನಲ್ಗೆ ಭಾರತೀಯ ಮಹಿಳಾ ತಂಡವು ಲಗ್ಗೆ ಇಟ್ಟಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 11-1 ಗೋಲುಗಳ ಅಂತರದಿಂದ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ಎದುರಿಸಲಿದೆ.
ಮಸ್ಕತ್ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರಂಭದ ಎರಡನೇ ನಿಮಿಷಯಲ್ಲಿ ನ್ಯೂಜಿಲೆಂಡ್ನ ಒರಿವಾ ಹೆಪಿ ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ, ನಂತರದಲ್ಲಿ ಭಾರತೀಯ ತಂಡವು ಪಂದ್ಯದ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಒರಿವಾ ಹೆಪಿ ಗೋಲು ಬಾರಿಸಿದ 15ನೇ ಸೆಕೆಂಡುಗಳಲ್ಲಿ ದೀಪಿಕಾ ಸೊರೆಂಗ್ ಗೋಲು ಗಳಿಸುವ ಮೂಲಕ ಟೀಂ ಇಂಡಿಯಾ 1-1ರ ಸಮಬಲ ಸಾಧಿಸಿತು.
ಮತ್ತೆ ಅಲ್ಲಿಂದ ಭಾರತೀಯ ಮಹಿಳೆಯರು ನ್ಯೂಜಿಲ್ಯಾಂಡ್ ತಂಡಕ್ಕೆ ಗೋಲು ಗಳಿಸುವ ಅವಕಾಶವನ್ನೇ ನೀಡಲಿಲ್ಲ. ರುತಾಜಾ ದಾದಾಸೊ ಪಿಸಲ್ (9ನೇ ನಿಮಿಷಕ್ಕೆ), ಮುಮ್ತಾಜ್ ಖಾನ್ (10ನೇ, 11ನೇ ನಿಮಿಷಕ್ಕೆ) ಸತತ ಗೋಲುಗಳನ್ನು ಬಾರಿಸಿದರು. ಇದರ ಬೆನ್ನಲ್ಲೇ ಮರಿಯಾನಾ ಕುಜುರ್ ಸಹ ಮೇಲಿಂದ ಮೇಲೆ ಎರಡು ಗೋಲುಗಳನ್ನು (13ನೇ, 14ನೇ ನಿಮಿಷಕ್ಕೆ) ಗಳಿಸುವ ಮೂಲಕ ಎದುರಾಳಿ ತಂಡವನ್ನು ಮತ್ತುಷ್ಟು ಒತ್ತಡಕ್ಕೆ ಸಿಲುಕಿಸಿದರು. ಇದರಿಂದ ಪಂದ್ಯದ ಮೊದಲಾರ್ಧವನ್ನು 6-1 ಅಂತರದ ಭರ್ಜರಿ ಮುನ್ನಡೆಯೊಂದಿಗೆ ಭಾರತ ಮುಗಿಸಿತು.