IPL Date Announced: ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಗಿದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಯಾವಾಗ ಪ್ರಾರಂಭವಾಗುತ್ತದೆ ಎಂದು ಎದುರು ನೋಡುತ್ತಿರುವ ಐಪಿಎಲ್‌ಪ್ರಿಯರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಶುಭಸುದ್ದಿ ನೀಡಿದ್ದಾರೆ. ಈ ವರ್ಷ ನಡೆಯಲಿರುವ 18ನೇ ಆವೃತ್ತಿಯ ಲೀಗ್‌ನ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
ಮುಂಬೈನಲ್ಲಿಂದು ನಡೆದ ಬಿಸಿಸಿಐ ಸಾಮಾನ್ಯ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶುಕ್ಲಾ, ಐಪಿಎಲ್ 2025ರ ಆರಂಭದ ದಿನಾಂಕವನ್ನು ಘೋಷಿಸಿದರು. ಚಾಂಪಿಯನ್ಸ್ ಟ್ರೋಫಿ ಮುಕ್ತಾಯಗೊಂಡ 14 ದಿನಗಳ ಬಳಿಕ ಚುಟುಕು ಕ್ರಿಕೆಟ್ ಹಬ್ಬ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಈ ಬಾರಿಯ ಐಪಿಎಲ್ ಹಬ್ಬ ಮಾರ್ಚ್ 23 ರಿಂದ ಪ್ರಾರಂಭವಾಗಲಿದೆ. ಫೈನಲ್ ಪಂದ್ಯದ ದಿನಾಂಕ ಘೋಷಣೆ ಆಗಿಲ್ಲ. ಆದರೆ ಮೇ 25ರಂದು ಫೈನಲ್ ಪಂದ್ಯ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐನಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಿದೆ.
ಕಳೆದ ವರ್ಷ ಐಪಿಎಲ್ ವೇಳಾಪಟ್ಟಿಯನ್ನು ಕೊನೆಯ ಕ್ಷಣದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಾರಿ ಎರಡು ತಿಂಗಳ ಮೊದಲೇ ಐಪಿಎಲ್ ದಿನಾಂಕ ಬಹಿರಂಗಗೊಂಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯೊಂದಿಗೆ ಐಪಿಎಲ್ ವೇಳಾಪಟ್ಟಿ ಘರ್ಷಣೆಯಾಗದಂತೆ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ.
ಚಾಂಪಿಯನ್ಸ್ ಟ್ರೋಫಿ:ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡವನ್ನು ಯಾವಾಗ ಪ್ರಕಟಿಸಲಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶುಕ್ಲಾ, ಜ.18 ಮತ್ತು 19ರಂದು ಬಿಸಿಸಿಐ ಸಭೆ ನಡೆಯಲಿದೆ. ಬಳಿಕ ತಂಡವನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.