ನವದೆಹಲಿ: ಸಾಧಿಸಬೇಕೆಂಬ ಛಲವಿದ್ದರೆ ಯಾವುದೇ ಕಷ್ಟಗಳನ್ನಾದರೂ ಮೆಟ್ಟಿ ನಿಲ್ಲಬಹುದು ಎಂಬುದನ್ನು ಭಾರತದ ಪ್ಯಾರಾ ಅಥ್ಲೀಟ್ ಕಪಿಲ್ ಪರ್ಮಾರ್ ಸಾಧಿಸಿ ತೋರಿಸಿದ್ದಾರೆ. ಗುರುವಾರ ನಡೆದ ಪ್ಯಾರಾಲಿಂಪಿಕ್ಸ್ನ ಪುರುಷರ ಪ್ಯಾರಾ ಜೂಡೋ 60 ಕೆ.ಜಿ (ಜೆ1) ವಿಭಾಗದ ಸ್ಪರ್ಧೆಯಲ್ಲಿ ವಿಶ್ವದ ನಂ.1 ಆಟಗಾರ ಕಪಿಲ್ ಪರ್ಮಾರ್ ಕಂಚಿನ ಪದಕ ಜಯಿಸಿದರು.
ಈ ಪಂದ್ಯದಲ್ಲಿ ಎದುರಾಳಿ ಆಟಗಾರ ಬ್ರೆಜಿಲ್ನ ಎಲಿಲ್ಟನ್ ಒಲಿವೇರಾ ಅವರನ್ನು 10-0 ಅಂತರದಿಂದ ಸೋಲಿಸಿ ಪದಕ ಸಾಧನೆ ಮಾಡಿದರು. ಇದರೊಂದಿಗೆ ಜೂಡೋದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆಯನ್ನೂ ನಿರ್ಮಿಸಿದರು. ಇದು ಪರ್ಮಾರ್ ವೃತ್ತಿಜೀವನದ ಅತೀ ದೊಡ್ಡ ಸಾಧನೆಯೂ ಹೌದು. ಆದರೆ ಕಪಿಲ್ ಈ ಸಾಧನೆಯ ಹಿಂದೆ ಅನೇಕ ನೋವಿನ ಸಂಗತಿಗಳಿವೆ.
ಯಾರು ಈ ಕಪಿಲ್ ಪರ್ಮಾರ್?:ವಿಶ್ವದ ಶ್ರೇಷ್ಠ ಆಟಗಾರ ಕಪಿಲ್ ಮೂಲತಃ ಮಧ್ಯಪ್ರದೇಶದ ಸೆಹೋರಾನ್‌ನವರು. ಮನೆಗೆ ಕಿರಿಯ ಮಗ. ತಂದೆ ಟ್ಯಾಕ್ಸಿ ಚಾಲಕರು. ಕಪಿಲ್ ಬಾಲ್ಯದಿಂದಲೂ ಜುಡೋ ಕ್ರೀಡೆ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಆದರೆ ಅದೊಂದು ದಿನ ಹೊಲದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಪಂಪ್‌ಸೆಟ್ ಸ್ಪರ್ಶಿಸಿ ತೀವ್ರ ವಿದ್ಯುತ್ ಆಘಾತಕ್ಕೊಳಗಾಗಿ ಕೋಮಾಕ್ಕೆ ತಲುಪಿದ್ದರು. ಸತತ 6 ತಿಂಗಳ ಕಾಲ ಕೋಮಾದಲ್ಲಿದ್ದ ಕಪಿಲ್ ಕಣ್ಣುಗಳು ತೀವ್ರಹಾನಿಗೊಳಗಾದವು. ಶೇ.90ರಷ್ಟು ದೃಷ್ಟಿ ಕಳೆದುಕೊಂಡರು. ಇಲ್ಲಿಗೆ ಮಗನ ಬದುಕೇ ಮುಗಿಯಿತು ಎಂದು ಪೋಷಕರು ಕಣ್ಣೀರು ಹಾಕಿದ್ದರು.