ಕರ್ನಾಟಕ

karnataka

ETV Bharat / sports

ಪ್ಯಾರಿಸ್​ ಒಲಿಂಪಿಕ್ಸ್​ 2024: ಹಾಕಿ ಪೆನಾಲ್ಟಿ ಸ್ಟ್ರೋಕ್​ನಲ್ಲಿ ಗೋಲ್​​ ಗಳಿಸಿ ಗೆದ್ದ ಭಾರತ - Paris Olympics 2024 - PARIS OLYMPICS 2024

Paris Olympics 2024: ಭಾರತದ ಪುರುಷರ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ನ್ಯೂಜಿಲೆಂಡ್​ ವಿರುದ್ದ ಅದ್ಭುತ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

ಪ್ಯಾರಿಸ್​ ಒಲಿಂಪಿಕ್ಸ್​ 2024
ಪ್ಯಾರಿಸ್​ ಒಲಿಂಪಿಕ್ಸ್​ 2024 (AP)

By ETV Bharat Karnataka Team

Published : Jul 27, 2024, 11:04 PM IST

ಪ್ಯಾರಿಸ್​: ಭಾರತದ ಪುರುಷರ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಅದ್ಭುತ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಶನಿವಾರ ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ‘ಬಿ’ ಗುಂಪಿನ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ 3-2 ಅಂತರದ ಭರ್ಜರಿ ಗೆಲುವು ದಾಖಲಿಸಿತು. ಭಾರತದ ಪರ ಮನದೀಪ್ ಸಿಂಗ್ (23ನೇ ನಿಮಿಷ) ಮತ್ತು ವಿವೇಕ್ ಸಾಗರ್ ಪ್ರಸಾದ್ (34ನೇ ನಿಮಿಷ) ಗೋಲು ಗಳಿಸಿದರು. ನ್ಯೂಜಿಲೆಂಡ್ ಪರ ಲೆನ್ ಸ್ಯಾಮ್ (8ನೇ ನಿಮಿಷ) ಮತ್ತು ಸೈಮನ್ ಚೈಲ್ಡ್ (53ನೇ ನಿಮಿಷ) ಗೋಲು ಬಾರಿಸಿದರು.

ಮೊದಲ ಕ್ವಾರ್ಟರ್​ನಲ್ಲಿ ಮುನ್ನಡೆ:ಪಂದ್ಯವನ್ನು ಆಕ್ರಮಣಕಾರಿ ಶೈಲಿಯಲ್ಲಿ ಪ್ರಾರಂಭಿಸಿದ ನ್ಯೂಜಿಲೆಂಡ್​ಗೆ 8ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಸಿಕ್ಕಿತು, ಈ ವೇಳೆ ಲೇನ್ ಸ್ಯಾಮ್ ಗೋಲ್ ಗಳಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಮೊದಲಾರ್ಧದಲ್ಲಿ ಭಾರತಕ್ಕೆ ಹಲವು ಅವಕಾಶಗಳು ಸಿಕ್ಕರೂ ಗೋಲು ಗಳಿಸಲು ವಿಫಲವಾಯಿತು.

ನಂತರ ಎರಡನೇ ಸುತ್ತಿನಲ್ಲಿ ಪುಟಿದೆದ್ದ ಭಾರತ ನ್ಯೂಜಿಲೆಂಡ್ ಮೇಲೆ ಒತ್ತಡ ಹೇರಲು ಪ್ರಾರಂಭಿಸಿತು. ಭಾರತದ ಸ್ಟಾರ್ ಫಾರ್ವರ್ಡ್ ಆಟಗಾರ ಮಂದೀಪ್ ಸಿಂಗ್ ಗೋಲು ಗಳಿಸಿ ನ್ಯೂಜಿಲೆಂಡ್ ವಿರುದ್ಧ ತನ್ನ ತಂಡವನ್ನು ಸಮಬಲಗೊಳಿಸಲು ನೆರವಾದರು. 23ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಹರ್ಮನ್‌ಪ್ರೀತ್ ಸಿಂಗ್ ಅವರ ಹೊಡೆತವನ್ನು ನ್ಯೂಜಿಲೆಂಡ್ ಗೋಲ್‌ಕೀಪರ್ ತಡೆದರೂ, ಬಳಿಕ ಮಂದೀಪ್ ರೀಬೌಂಡ್‌ನಲ್ಲಿ ಗೋಲು ಗಳಿಸಿದರು. ವಿರಾಮದ ವೇಳೆಗೆ ಸ್ಕೋರ್ 1-1 ಅಂತರದಿಂದ ಸಮಬಲ ಸಾಧಿಸಿತು.

ಮೂರನೇ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಮುನ್ನಡೆ:ಮೂರನೇ ಕ್ವಾರ್ಟರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತೊಂದು ಗೋಲು ಗಳಿಸುವ ಮೂಲಕ ಭಾರತ ಮುನ್ನಡೆ ಸಾಧಿಸಿತು. ಭಾರತದ ಪರ ವಿವೇಕ್ ಸಾಗರ್ ಪ್ರಸಾದ್ 34ನೇ ನಿಮಿಷದಲ್ಲಿ ಅದ್ಭುತ ಫೀಲ್ಡ್ ಗೋಲು ಬಾರಿಸಿ ಭಾರತವನ್ನು 2-1 ಅಂತರದಿಂದ ಮುನ್ನಡೆಸಿದರು. ಕ್ವಾರ್ಟರ್‌ನಲ್ಲಿ ನ್ಯೂಜಿಲೆಂಡ್ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡಿತು, ಇದನ್ನು ಭಾರತದ ಅನುಭವಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅದ್ಭುತವಾಗಿ ರಕ್ಷಿಸಿದರು.

ಪೆನಾಲ್ಟಿ ಸ್ಟ್ರೋಕ್​ನಲ್ಲಿ ಗೆದ್ದ ಭಾರತ:ಅಂತಿಮವಾಗಿ58ನೇ ನಿಮಿಷದಲ್ಲಿ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಸಿಕ್ಕ ಪೆನಾಲ್ಟಿ ಸ್ಟ್ರೋಕ್​ನ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ಗೋಲ್​ ದಾಖಲಿಸುವ ಮೂಲಕ 3-2 ಅಂತರದಿಂದ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ 2024ರ ಮೊದಲ ಪಂದ್ಯದಲ್ಲಿ ಭಾರತದ ಗೆಲುವನ್ನು ಖಚಿತಪಡಿಸಿದರು.

ಇದನ್ನೂ ಓದಿ:ಬ್ಯಾಡ್ಮಿಂಟನ್​ ಡಬಲ್ಸ್​ನಲ್ಲಿ ಭಾರತಕ್ಕೆ ಗೆಲುವು: ಫ್ರೆಂಚರ ವಿರುದ್ಧ ಸಾತ್ವಿಕ್‌, ಚಿರಾಗ್ ಶೆಟ್ಟಿ ಜೋಡಿ ಶುಭಾರಂಭ - paris olympics 2024 badminton

ABOUT THE AUTHOR

...view details