ಬ್ರಿಡ್ಜ್ಟೌನ್(ಬಾರ್ಬಡೊಸ್): ಚಂಡಮಾರುತದಿಂದಾಗಿ ಬಾರ್ಬಡೋಸ್ನಲ್ಲಿ ಸಿಲುಕಿರುವ ಟಿ20 ವಿಶ್ವಕಪ್ ವಿಜೇತ ಭಾರತ ತಂಡ ಇಂದು ಸಂಜೆ ಸ್ವದೇಶಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಮುಂದಿನ 6ರಿಂದ 12 ಗಂಟೆಯೊಳಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಬಾರ್ಬಡೋಸ್ ಪ್ರಧಾನಿ ಮಿಯಾ ಮೊಟ್ಲಿ ತಿಳಿಸಿದ್ದಾರೆ.
ಬಾರ್ಬಡೋಸ್ನಲ್ಲಿ ಸೋಮವಾರ ಬೆರಿಲ್ ಚಂಡಮಾರುತ ಅಪ್ಪಳಿಸಿದ್ದರಿಂದ ವಿಮಾನಯಾನ ಸೇರಿದಂತೆ ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ವಿಶ್ವಕಪ್ ಟೂರ್ನಿಗಾಗಿ ಬಾರ್ಬಡೋಸ್ಗೆ ತೆರಳಿದ್ದ ಟೀಂ ಇಂಡಿಯಾ ಫೈನಲ್ ಪಂದ್ಯದ ಬಳಿಕ ಸ್ವದೇಶಕ್ಕೆ ಮರಳಲು ಸಾಧ್ಯವಾಗದೇ ಅಲ್ಲಿಯೇ ಸಿಲುಕಿಕೊಂಡಿದೆ. ತಂಡದ ಆಟಗಾರರೊಂದಿಗೆ ಸಹಾಯಕ ಸಿಬ್ಬಂದಿ, ಕೆಲವು ಬಿಸಿಸಿಐ ಅಧಿಕಾರಿಗಳು ಮತ್ತು ಆಟಗಾರರ ಕುಟುಂಬಗಳು ಕಳೆದೆರಡು ದಿನಗಳಿಂದ ನಗರದಲ್ಲಿ ಬೀಡುಬಿಟ್ಟಿದ್ದಾರೆ.
ಪ್ರಧಾನಿ ಮೋಟ್ಲಿ ಪ್ರತಿಕ್ರಿಯಿಸಿ, ಮುಂದಿನ ಕೆಲವು ಗಂಟೆಗಳಲ್ಲಿ ಹವಾಮಾನ ಸಂಪೂರ್ಣವಾಗಿ ತಿಳಿಯಾಗುವ ನಿರೀಕ್ಷೆ ಇದೆ. ಆದರೆ ಈ ಬಗ್ಗೆ ಮುಂಚಿತವಾಗಿ ಏನನ್ನೂ ಹೇಳಬಯಸುವುದಿಲ್ಲ. ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯಲಾಗುತ್ತದೆ. ಸದ್ಯ ಏರ್ಪೋರ್ಟ್ ಸಿಬ್ಬಂದಿ ಅಂತಿಮ ತಪಾಸಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.