INDW vs WIW: ಇತ್ತೀಚೆಗೆ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಮಹಿಳಾ ತಂಡ 3 ಪಂದ್ಯಗಲ್ಲಿ ಸೋಲನುಭವಿಸಿ ವೈಟ್ ವಾಶ್ ಆಗಿ ತವರಿಗೆ ತಲುಪಿತ್ತು. ಇದೀಗ ಭಾರತೀಯ ವನಿತೆಯರು ಮತ್ತೊಂದು ಸಮರಕ್ಕೆ ಸಜ್ಜಾಗಿದ್ದಾರೆ. ತವರಿನಲ್ಲಿ ವೆಸ್ಟ್ ಇಂಡೀಸ್ ಮಹಿಳಾ ತಂಡದ ವಿರುದ್ಧ T20 ಸರಣಿ ಆಡಲಿದ್ದಾರೆ.
ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ ಪ್ರಾರಂಭವಾಗಲಿದೆ. ಆಸ್ಟ್ರೇಲಿಯಾ ವಿರುದ್ಧದ ಹೀನಾಯ ಸೋಲಿನ ಬೆನ್ನಲ್ಲೆ ಭಾರತ ಮಹಿಳಾ ತಂಡದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಸತತ ವಿಫಲವಾಗುತ್ತಿದ್ದ ಶಫಾಲಿ ವರ್ಮಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದಲ್ಲದೇ ಮೂವರು ಅನ್‌ಕ್ಯಾಪ್ ಆಟಗಾರರಾದ ನಂದಿನಿ ಕಶ್ಯಪ್, ರಾಘವಿ ಬಿಸ್ತ್ ಮತ್ತು ಪ್ರತೀಕಾ ರಾವಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮತ್ತೊಂದೆಡೆ ಹೇಲಿ ಮ್ಯಾಥ್ಯೂಸ್ ನೇತೃತ್ವದ ವೆಸ್ಟ್ ಇಂಡೀಸ್ ಕೂಡ ಬಲಿಷ್ಠ ತಂಡದೊಂದಿಗೆ ಭಾರತಕ್ಕೆ ಆಗಮಿಸಿದೆ. ಅನುಭವಿ ಆಟಗಾರ್ತಿ ಸ್ಟೆಫನಿ ಟೇಲರ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿದ್ದು, ಕ್ರಿಸ್ ಗೇಲ್ರಂತೆ ವಿಧ್ವಂಸಕ ಆಟಕ್ಕೆ ಹೆಸರುವಾಸಿಯಾಗಿದ್ದ ಡಿಯಾಂಡ್ರಾ ಡಾಟಿನ್ ತಂಡಕ್ಕೆ ಮರಳಿದ್ದಾರೆ.
ಹೆಡ್ ಟು ಹೆಡ್ ದಾಖಲೆ: ಉಭಯ ತಂಡಗಳ ಮಧ್ಯೆ ಈ ವರೆಗೂ ಒಟ್ಟು 21 T20 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ಈ ವರೆಗೂ ಟೀಂ ಇಂಡಿಯಾ 13 ಗೆಲುವಿನೊಂದಿಗೆ ಮೇಲುಗೈ ಸಾಧಿಸಿದ್ದರೇ, ವೆಸ್ಟ್ ಇಂಡೀಸ್ ಒಟ್ಟು 8 ಪಮದ್ಯಗಳಲ್ಲಿ ಗೆಲುವು ಸಾಧಿಸಿದೆ.
ಲೈವ್ ಸ್ಟ್ರೀಮಿಂಗ್:ಭಾರತೀಯ ಕ್ರಿಕೆಟ್ ಅಭಿಮಾನಿಗಳು ಉಭಯ ತಂಡಗಳ ನಡುವಿನ ಈ ಪಂದ್ಯವನ್ನು ಸ್ಪೋರ್ಟ್ಸ್ 18 1 ಹೆಚ್ಡಿ, ಸ್ಪೋರ್ಟ್ಸ್ 18 2 ಟಿವಿ ಚಾನೆಲ್ನಲ್ಲಿ ಪಂದ್ಯ ಲೈವ್ ಆಗಿ ವೀಕ್ಷಿಸಬಹುದು. ಮೊಬೈಲ್ನಲ್ಲಿ ಜಿಯೋ ಸಿನಿಮಾ ಅಪ್ಲಿಕೇಶನ್ನಲ್ಲಿ ಪಂದ್ಯವನ್ನು ಆನಂದಿಸಬಹುದು.