ನವದೆಹಲಿ:ಇಲ್ಲಿನ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಖೋ - ಖೋ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ ಮಹಿಳಾ ಹಾಗೂ ಪುರುಷರ ತಂಡಗಳು ಚೊಚ್ಚಲ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿವೆ.
ಭಾನುವಾರ ಮೊದಲು ನಡೆದ ಮಹಿಳೆಯರ ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು ಮಣಿಸಿದ ಭಾರತ ಟ್ರೋಫಿಯನ್ನು ಎತ್ತಿ ಹಿಡಿಯಿತು. ನಂತರ ನಡೆದ ಪುರುಷರ ಫೈನಲ್ ಪಂದ್ಯದಲ್ಲಿಯೂ ಕೂಡ ಭಾರತದ ಪುರುಷರ ತಂಡ ನೇಪಾಳ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಪ್ರಿಯಾಂಕಾ ಇಂಗ್ಲೆ ನಾಯಕತ್ವದ ಮಹಿಳಾ ತಂಡ ನೇಪಾಳವನ್ನು 78-40 ಅಂಕಗಳ ಅಂತರದಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಭಾರತ ಚೇಸ್ ಮತ್ತು ಡಿಫೆನ್ಸ್ ಎರಡರಲ್ಲೂ ಪ್ರಾಬಲ್ಯ ಮೆರೆಯಿತು.
ಟರ್ನ್-1ರಲ್ಲಿ ದಾಳಿಗಿಳಿದ ವುಮೆನ್ ಇನ್ ಬ್ಲೂ ತಂಡ ರಕ್ಷಣಾ ವಿಭಾಗದಲ್ಲಿ ನೇಪಾಳದ ಆಟಗಾರ್ತಿಯರು ಮಾಡಿದ ತಪ್ಪುಗಳ ಸಂಪೂರ್ಣ ಲಾಭ ಪಡೆದು, 34-0 ಅಂತರದ ಬೃಹತ್ ಮುನ್ನಡೆ ಸಾಧಿಸಿತು. ಎರಡನೇ ಟರ್ನ್ನಲ್ಲಿ ನೇಪಾಳ ತಂಡ ಪ್ರತಿರೋಧ ನೀಡಿತ್ತಾದರೂ ಭಾರತದ ಡಿಫೆಂಡರ್‌ಗಳು ಸುಲಭವಾಗಿ ಅಂಕ ಗಳಿಸಲು ಅವಕಾಶ ನೀಡಲಿಲ್ಲ. ಹೀಗಾಗಿ, ಎರಡನೇ ಟರ್ನ್ 35-24 ಅಂಕಗಳ ಮುನ್ನಡೆ ಸಾಧಿಸಿತು. ಮೂರನೇ ಟರ್ನ್ನಲ್ಲಿ ಮತ್ತೊಮ್ಮೆ ದಾಳಿಗಿಳಿದ ಟೀಂ ಇಂಡಿಯಾ 49 ಅಂಕಗಳ ಭಾರಿ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
4ನೇ ಮತ್ತು ಕೊನೆಯ ಟರ್ನ್ನಲ್ಲಿ ನೇಪಾಳ ತಂಡ ಭಾರತ ತಂಡದ ಡಿಫೆಂಡರ್‌ಗಳನ್ನು ಔಟ್ ಮಾಡಲು ತುಂಬಾ ಕಷ್ಟಪಟ್ಟರು. ಅಂತಿಮವಾಗಿ ಭಾರತ ಮಹಿಳಾ ತಂಡ 78-40 ಅಂಕಗಳ ಅಂತರದಿಂದ ನೇಪಾಳವನ್ನು ಮಣಿಸಿ ಪ್ರಶಸ್ತಿ ಜಯಿಸಿತು.
ಪುರುಷರ ತಂಡ ಚಾಂಪಿಯನ್:ಚೊಚ್ಚಲ ಖೋ ಖೋ ವಿಶ್ವಕಪ್‌ನಲ್ಲಿ ರೋಚಕ ಫೈನಲ್‌ನಲ್ಲಿ ನೇಪಾಳವನ್ನು 54-36 ಅಂಕಗಳಿಂದ ಸೋಲಿಸಿದ ಭಾರತೀಯ ಪುರುಷರ ತಂಡವು ಕೂಡ ವಿಶ್ವ ಚಾಂಪಿಯಕನ್ ಆಗಿ ಹೊರ ಹೊಮ್ಮಿತು. ಭಾರತದ ಗೆಲುವಿನಲ್ಲಿ ನಾಯಕ ಪ್ರತೀಕ್ ವೈಕರ್ ಹಾಗೂ ರಾಮ್ ಜಿ ಕಶ್ಯಪ್ ಮಹತ್ವದ ಪಾತ್ರ ವಹಿಸಿದರು. ಶನಿವಾರ ನಡೆದ ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 62-42 ಅಂಕಗಳಿಂದ ಮಣಿಸಿದ ಭಾರತ ಪುರುಷರ ತಂಡ ಫೈನಲ್‌ಗೆ ತಲುಪಿತ್ತು.
ಇನ್ನು, ಒಂದೇ ದಿನದಲ್ಲಿ ಮಹಿಳಾ ಮತ್ತು ಪುರುಷರ ತಂಡಗಳು ಚಾಪಿಯನ್ ಆಗುವ ಮೂಲಕ ಇತಿಹಾಸ ನಿರ್ಮಿಸಿವೆ.
ಪ್ರಧಾನಿ ಅಭಿನಂದನೆ:ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, "ಚೊಚ್ಚಲ ಖೋ - ಖೋ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆಗಳು. ಈ ಐತಿಹಾಸಿಕ ಗೆಲುವು ಅವರ ಅಪ್ರತಿಮ ಕೌಶಲ್ಯ, ದೃಢಸಂಕಲ್ಪವನ್ನು ಪ್ರದರ್ಶಿಸುತ್ತದೆ. ಈ ಜಯ ಭಾರತದ ಅತ್ಯಂತ ಹಳೆಯ ಸಾಂಪ್ರದಾಯಿಕ ಕ್ರೀಡೆಗೆ ಕಡೆಗೆ ತಿರುಗಿ ನೋಡುವಂತೆ ಮಾಡಿದೆ. ರಾಷ್ಟ್ರದಾದ್ಯಂತ ಅಸಂಖ್ಯಾತ ಯುವ ಕ್ರೀಡಾಪಟುಗಳನ್ನು ಇದು ಪ್ರೇರೇಪಿಸಿದೆ. ಈ ಸಾಧನೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು ಈ ಕ್ರೀಡೆಯಲ್ಲಿ ಪಾಲ್ಗೊಳ್ಳಲು ದಾರಿ ಮಾಡಿಕೊಡಲಿ" ಎಂದಿದ್ದಾರೆ.
ಇದನ್ನೂ ಓದಿ:ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ 5ನೇ ಬಾರಿ ಚಾಂಪಿಯನ್