IND vs SA 2nd T20: ಟೀಂ ಇಂಡಿಯಾ (Team India) ವಿರುದ್ಧ ನಡೆದ T20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) ಭರ್ಜರಿ ಗೆಲುವು ಸಾಧಿಸಿದೆ. ಭಾನುವಾರ ಸೇಂಟ್ ಜಾರ್ಜಸ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕು ಪಂದ್ಯಗಳ ಟಿ20 ಸರಣಿಯ (T20 Series) ಎರಡನೇ ಪಂದ್ಯದಲ್ಲಿ ಹರಿಣ ಪಡೆ 3 ವಿಕೆಟ್ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಸರಣಿಯಲ್ಲಿ 1-1 ಸಮಬಲ ಸಾಧಿಸಿತು.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ್ದ ಭಾರತ ಪವರ್ ಪ್ಲೇನಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಘರ್ಜಿಸಿದ್ದ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಖಾತೆ ತೆರೆಯದೆ ಶೂನ್ಯಕ್ಕೆ ನಿರ್ಗಮಿಸಿದರು. ಮತ್ತೊಂದೆಡೆ, ಸತತ ವೈಫಲ್ಯ ಅನುಭವಿಸುತ್ತಿರುವ ಓಪನರ್ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲೂ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಹಾರ್ದಿಕ್ ಪಾಂಡ್ಯ (39) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಹರಿಣ ಪಡೆಯ ಬೌಲಿಂಗ್ ದಾಳಿಗೆ ಸಿಲುಕಿ ಕನಿಷ್ಠ 30ರ ಗಡಿ ತಲುಪಲು ಸಾಧ್ಯವಾಗಲಿಲ್ಲ. ತಿಲಕ್ ವರ್ಮಾ (20), ಅಕ್ಷರ್ ಪಟೇಲ್ (27), ರಿಂಕು ಸಿಂಗ್ (9), ಅರ್ಷದೀಪ್ (7) ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದರು.
ಬ್ಯಾಟಿಂಗ್ ಲೈನ್ಅಪ್ ಕುಸಿತದಿಂದಾಗಿ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 124 ರನ್ ಗಳಿಸಲಷ್ಟೇ ಶಕ್ತವಾಯಿತು.
ಆಪತ್ಪಾಂಧವ ಸ್ಟಬ್ಸ್: ಈ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಎದ್ದು ಬಿದ್ದು ಗೆಲುವಿನ ದಡ ಸೇರಿತು. ಟ್ರಿಸ್ಟನ್ ಸ್ಟಬ್ಸ್ (47), ಹೆಂಡ್ರಿಕ್ (27) ಬ್ಯಾಟಿಂಗ್ ನೆರವಿನಿಂದ 1 ಓವರ್ ಬಾಕಿ ಇರುವಂತೆಯೇ ಪಂದ್ಯ ಗೆದ್ದುಕೊಂಡಿತು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್ಮನ್ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ.