IND vs SA 1st T20:ಟಿ20 ಸರಣಿಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ ಇಂದು ಮೊದಲ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಉಭಯ ತಂಡಗಳ ನಡುವೆ ಒಟ್ಟು 4 ಪಂದ್ಯಗಳು ನಡೆಯಲಿವೆ.
ಈ ವರ್ಷ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿತ್ತು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.
ವಿ.ವಿ.ಎಸ್.ಲಕ್ಷ್ಮಣ್ ಕೋಚ್: ಈ ಸರಣಿಯನ್ನು ಹೊಸ ನಾಯಕ ಮತ್ತು ಕೋಚ್ನೊಂದಿಗೆ ಟೀಂ ಇಂಡಿಯಾ ಆಡಲಿದೆ. ರೋಹಿತ್ ಶರ್ಮಾ ಟಿ20ಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ, ಸೂರ್ಯಕುಮಾರ್ ಯಾದವ್ ಅವರನ್ನು ಟಿ20ಗೆ ಖಾಯಂ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಮತ್ತೊಂದೆಡೆ, ಗೌತಮ್ ಗಂಭೀರ್ ಬದಲಿಗೆ ವಿ.ವಿ.ಎಸ್.ಲಕ್ಷ್ಮಣ್ ಈ ಟಿ20 ಸರಣಿಗೆ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಗಂಭೀರ್ ಆಸ್ಟ್ರೇಲಿಯಾಗೆ ಪ್ರವಾಸ ಬೆಳೆಸಲಿದ್ದು, ಅಲ್ಲಿ ಭಾರತ ಒಟ್ಟು 5 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ.
ಭಾರತ-ದ.ಆಫ್ರಿಕಾ ಮುಖಾಮುಖಿ:ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿದೆ. ಉಭಯ ತಂಡಗಳು ಇದುವರೆಗೆ ಒಟ್ಟು 27 ಟಿ20 ಪಂದ್ಯಗಳನ್ನು ಆಡಿವೆ. ಇದರಲ್ಲಿ ಭಾರತ 15ರಲ್ಲಿ ಗೆದ್ದು 11ರಲ್ಲಿ ಸೋತಿದೆ. ಆದರೆ ಆಫ್ರಿಕನ್ ದೇಶದಲ್ಲಿ ಭಾರತ ಒಟ್ಟು 15 ಟಿ20 ಪಂದ್ಯಗಳನ್ನು ಆಡಿದ್ದು, 10ರಲ್ಲಿ ಗೆದ್ದು 4ರಲ್ಲಿ ಮಾತ್ರ ಸೋತಿದೆ. ಅಲ್ಲದೇ 2007ರಲ್ಲಿ ಈ ದೇಶದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಅನ್ನು ಭಾರತ ಗೆದ್ದಿತ್ತು.
ಕಳೆದ 5 ಸರಣಿಯಲ್ಲಿ ಭಾರತದ ಮೇಲುಗೈ:ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿರುವ ಕಳೆದ 5 ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಭಾರತ ಒಮ್ಮೆಯೂ ಸೋತಿಲ್ಲ. ಇದರಲ್ಲಿ ಟೀಂ ಇಂಡಿಯಾ 2 ಸರಣಿಯನ್ನು ಗೆದ್ದುಕೊಂಡಿದ್ದು, 3 ಸರಣಿ ಡ್ರಾನಲ್ಲಿ ಅಂತ್ಯಗೊಂಡಿದೆ. ಉಭಯ ತಂಡಗಳ ನಡುವೆ ಇದುವರೆಗೆ 9 ದ್ವಿಪಕ್ಷೀಯ ಟಿ20 ಸರಣಿಗಳು ನಡೆದಿದ್ದು, ಭಾರತ 4 ಮತ್ತು ದಕ್ಷಿಣ ಆಫ್ರಿಕಾ 2ರಲ್ಲಿ ಗೆದ್ದಿದೆ. 3 ಸರಣಿ ಡ್ರಾ ಆಗಿದೆ.