ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸ್ಪಿನ್‌ಸ್ನೇಹಿ "ರ್ಯಾಂಕ್ ಟರ್ನರ್" ಪಿಚ್ ತಯಾರಿಸಿ ಕೊಡುವಂತೆ ಭಾರತ ತಂಡ ಕೋರಿದೆ ಎಂದು ವರದಿಯಾಗಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಸೋತ ನಂತರ ಸರಣಿಯು 2-0 ಯೊಂದಿಗೆ ನ್ಯೂಜಿಲೆಂಡ್ ಪರ ವಾಲಿದೆ. ಇದು 2012ರ ನಂತರ ತವರಿನಲ್ಲಿ ಭಾರತದ ಮೊದಲ ಟೆಸ್ಟ್ ಸರಣಿ ಸೋಲಾಗಿದ್ದು, ಸತತ 18 ಸರಣಿ ಗೆಲುವಿನ ಅಂತ್ಯವಾಗಿದೆ.
ಮೂರನೇ ಟೆಸ್ಟ್ ಬಗ್ಗೆ ಭಾರತ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಈ ಹಿಂದೆ 2000ನೇ ಇಸವಿಯ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತದಲ್ಲಿ 2-0 ಅಂತರದಲ್ಲಿ ಸರಣಿ ಜಯಿಸಿತ್ತು. ಅದರ ನಂತರ ಈಗ ಭಾರತದಲ್ಲಿ ಮೊದಲ ಬಾರಿಗೆ ಸರಣಿಯನ್ನು ಸಂಪೂರ್ಣವಾಗಿ ಜಯಿಸಲು ಪ್ರಯತ್ನಿಸುತ್ತಿರುವ ನ್ಯೂಜಿಲೆಂಡ್, ಬೆಂಗಳೂರು ಮತ್ತು ಪುಣೆ ಟೆಸ್ಟ್ಗಳಲ್ಲಿ ವ್ಯತಿರಿಕ್ತ ಪರಿಸ್ಥಿತಿಗಳನ್ನು ಬಳಸಿಕೊಂಡು ಜಯ ಸಾಧಿಸಿತ್ತು. ನ್ಯೂಜಿಲೆಂಡ್ ವೇಗ ಮತ್ತು ಸ್ಪಿನ್ ಎರಡರಲ್ಲೂ ಭಾರತವನ್ನು ಹಣಿಯಿತು.
ಹೀಗಾಗಿ ಮೊದಲ ದಿನದಿಂದಲೇ ಸ್ಪಿನ್‌ಗೆ ನೆರವಾಗುವಂಥ ಪಿಚ್ ಸಿದ್ಧಪಡಿಸುವಂತೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ)ಗೆ ಮನವಿ ಮಾಡಿದೆ ಎನ್ನಲಾಗಿದೆ. ಪುಣೆಯಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್ಗಳಿಗೆ ತನ್ನ 20 ವಿಕೆಟ್ಗಳ ಪೈಕಿ 19 ವಿಕೆಟ್‌ಗಳನ್ನು ಭಾರತ ಕಳೆದುಕೊಂಡಿತ್ತು. ಮಿಚೆಲ್ ಸ್ಯಾಂಟ್ನರ್ ಒಬ್ಬರೇ 13 ವಿಕೆಟ್‌ಗಳನ್ನು ಕಬಳಿಸಿದ್ದರು. ಹೀಗಾಗಿ ಟರ್ನಿಂಗ್ ಟ್ರ್ಯಾಕ್ಗಳಲ್ಲಿ ಉತ್ತಮ ಸ್ಪಿನ್ ಬೌಲಿಂಗ್ ಎದುರು ಭಾರತದ ನಿರಂತರ ವೈಫಲ್ಯಗಳನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.