ಜಾರ್ಜ್‌ಟೌನ್(ಗಯಾನ):ಟಿ20 ವಿಶ್ವಕಪ್‌ನ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಪಂದ್ಯಕ್ಕೆ ಮಳೆರಾಯನ ತೊಂದರೆ ಎದುರಾಗಿದೆ. ಭಾರತ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿ ಆಡುತ್ತಿತ್ತು. ಈ ಸಂದರ್ಭದಲ್ಲಿ ಜೋರಾಗಿ ಮಳೆ ಸುರಿಯಿತು. ಹೀಗಾಗಿ, ಅಂಪೈರ್‌ಗಳು ಪಂದ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು. ನಾಯಕ ರೋಹಿತ್ ಶರ್ಮಾ ಹಾಗು ಸೂರ್ಯ ಕುಮಾರ್ ಯಾದವ್ ಕ್ರೀಸ್‌ನಲ್ಲಿದ್ದಾರೆ. ರೋಹಿತ್ 37 ರನ್ ಹಾಗು ಸೂರ್ಯ 13 ರನ್ ಗಳಿಸಿ ಆಡುತ್ತಿದ್ದಾರೆ.
ಇದಕ್ಕೂ ಮುನ್ನ ಮಳೆಯಿಂದಾಗಿ ಪಂದ್ಯ 1 ಗಂಟೆ ತಡವಾಗಿ ಆರಂಭವಾಯಿತು. ಮೊದಲು ಬ್ಯಾಟ್ ಮಾಡಲು ಕಣಕ್ಕಿಳಿದ ಭಾರತ ತಂಡ, ಆರಂಭಿಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ನಂತರ ಕ್ರೀಸ್‌ನಲ್ಲಿ ಜೊತೆಯಾದ ರಿಷಬ್ ಪಂತ್ ಕೂಡಾ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.
ವಿರಾಟ್ ಕೊಹ್ಲಿ ವೈಫಲ್ಯ ಮುಂದುವರಿಕೆ:ಸೆಮಿಫೈನಲ್ನಂತಹ ಮಹತ್ವದ ಪಂದ್ಯದಲ್ಲಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಸಿಡಿಯುತ್ತಾರೆ ಎಂಬ ಮಹದಾಸೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಆಟಗಾರ ಮತ್ತೆ ನಿರಾಸೆ ಮೂಡಿಸಿದರು. 9 ಎಸೆತಗಳಲ್ಲಿ 1 ಸಿಕ್ಸರ್ ಸಮೇತ 9 ರನ್ಗೆ ರೀಸ್ ಟಾಪ್ಲೆಗೆ ಕ್ಲೀನ್ಬೌಲ್ಡ್ ಆದರು. ಶತಕಗಳ ಮೇಲೆ ಶತಕ ಬಾರಿಸಿ, ಐಪಿಎಲ್ನಲ್ಲಿ ಅಬ್ಬರಿಸಿದ್ದ ಆಟಗಾರ ವಿಕೆಟ್ ನೀಡಿ ದುಬಾರಿಯಾದರು. ಟೂರ್ನಿಯಲ್ಲಿ ಆಡಿದ 7 ಇನಿಂಗ್ಸ್ಗಳಲ್ಲಿ ಕೊಹ್ಲಿ ಕೇವಲ 75 ರನ್ ಮಾತ್ರ ಗಳಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ 37 ರನ್ ಗಳಿಸಿದ್ದೇ ಅತ್ಯಧಿಕವಾಗಿದೆ.