ನವದೆಹಲಿ:ಯುವ ಕ್ರಿಕೆಟಿಗ ನಿತಿಶ್ ರೆಡ್ಡಿ ಆಲ್ರೌಂಡರ್ ಆಟ, ರಿಂಕು ಸಿಂಗ್ರ ಭರ್ಜರಿ ಬ್ಯಾಟಿಂಗ್ ಎದುರು ಬಾಂಗ್ಲಾದೇಶ ನಿರುತ್ತರವಾಯಿತು. ಇದರಿಂದ 2ನೇ ಟಿ20 ಪಂದ್ಯದಲ್ಲೂ 86 ರನ್ಗಳಿಂದ ಸೋಲು ಕಂಡಿತು. ಈ ಮೂಲಕ ಭಾರತ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಜಯಿಸಿತು.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಟಾಸ್ ಗೆದ್ದರೂ ಭಾರತವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದ ಬಾಂಗ್ಲಾ ದುಬಾರಿ ಬೆಲೆ ತೆತ್ತಿತು. ನಿತಿಶ್ ರೆಡ್ಡಿ, ರಿಂಕು ಸಿಂಗ್ ಅರ್ಧಶತಕದ ಬಲದಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ 221 ರನ್ ಗಳಿಸಿತು. ಬೆಟ್ಟದಂತಹ ಸ್ಕೋರ್ ಕಂಡೇ ಬಾಂಗ್ಲಾ ಬೆದರಿ ನಿಗದಿತ ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿ, 86 ರನ್ಗಳ ಸೋಲುಂಡಿತು.
7 ಬೌಲರ್ಗಳಿಗೂ ದಕ್ಕಿದ ವಿಕೆಟ್:ದೊಡ್ಡ ಸ್ಕೋರ್ ಬೆನ್ನತ್ತಿದ ಹುಸೈನ್ ಶ್ಯಾಂಟೊ ಪಡೆ ಆರಂಭಿದಿಂದಲೇ ಎಡವುತ್ತಾ ಸಾಗಿತು. ಯಾವೊಬ್ಬ ಬ್ಯಾಟರ್ ಕೂಡ ಕ್ರೀಸ್ನಲ್ಲಿ ನಿಲ್ಲದೇ ಬಂದಷ್ಟೇ ವೇಗವಾಗಿ ಹೊರನಡೆದರು. ಹಿರಿಯ ಆಟಗಾರ ಮಹಮದುಲ್ಲಾ ಮಾತ್ರ 39 ಎಸೆತಗಳಲ್ಲಿ 41 ರನ್ ಗಳಿಸಿದರು. ನಿಖರ ದಾಳಿ ನಡೆಸಿದ ಭಾರತೀಯ ಬೌಲರ್ಗಳು ಯಾವುದೇ ಹಂತದಲ್ಲಿ ಬಾಂಗ್ಲಾ ಪುಟಿಯದಂತೆ ನೋಡಿಕೊಂಡರು.