Yashasvi Jaiswal Breaks Gambhir Record:ಟೀಂ ಇಂಡಿಯಾ ಆರಂಭಿಕ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಸ್ವರೂಪದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5 ಟೆಸ್ಟ್ ಪಂದ್ಯಗಳ ಬಾರ್ಡರ್ - ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಜೈಸ್ವಾಲ್ ಅಪರೂಪದ ಸಾಧನೆ ಮಾಡಿದ್ದಾರೆ. ಪರ್ತ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದ ಜೈಸ್ವಾಲ್ ಎರಡನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿ ಅರ್ಧಶತಕ ಪೂರೈಸಿದ್ದಾರೆ. ಇಂದು ಆಸೀಸ್ ಬೌಲರ್ಗಳ ಮಾರಕ ದಾಳಿ ಎದುರಿಸಿದ ಜೈಸ್ವಾಲ್ 90 ರನ್ಗಳಿಸಿ ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು 10 ರನ್ ಕಲೆಹಾಕಿದರೇ ಆಸ್ಟ್ರೇಲಿಯಾದಲ್ಲಿ ಜೈಸ್ವಾಲ್ ಮೊದಲ ಶತಕ ದಾಖಲಾಗಲಿದೆ.
ಜೈಸ್ವಾಲ್ ಈ ಪಂದ್ಯದಲ್ಲಿ 42 ರನ್ಗಳನ್ನು ಪೂರ್ಣಗೊಳಿಸುತ್ತಿದ್ದಂತೆ 16 ವರ್ಷಗಳ ಕಾಲ ಗೌತಮ್ ಗಂಭೀರ್ ಹೆಸರಲ್ಲಿದ್ದ ದಾಖಲೆಯನ್ನು ಮುರಿದು ಹಾಕಿದ್ದಾರೆ. ಈ ವರ್ಷ ಟೆಸ್ಟ್ನಲ್ಲಿ ಇದುವರೆಗೂ ಅವರು ಒಟ್ಟು 1,136 ರನ್ ಗಳಿಸಿದ್ದಾರೆ. ಇದರೊಂದಿಗೆ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತೀಯ ಎಡಗೈ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ.
ಈ ಹಿಂದೆ 2008ರಲ್ಲಿ ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್ ಎಂಟು ಟೆಸ್ಟ್ ಪಂದ್ಯಗಳನ್ನು ಆಡಿ 70.67ರ ಸರಾಸರಿಯಲ್ಲಿ 1134 ರನ್ ಗಳಿಸಿದ್ದರು. ಇದರಲ್ಲಿ ಆರು ಅರ್ಧಶತಕ ಮತ್ತು ಮೂರು ಶತಕಗಳ ಸೇರಿದ್ದವು. ಜೈಸ್ವಾಲ್ ಪ್ರಸ್ತುತ 12 ಟೆಸ್ಟ್ಗಳಲ್ಲಿ 57.06ರ ಸರಾಸರಿಯಲ್ಲಿ 1200ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 7 ಅರ್ಧ ಶತಕ ಹಾಗೂ 2 ಶತಕಗಳು ಸೇರಿವೆ. ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎಡಗೈ ಆಟಗಾರರ ಪಟ್ಟಿಯಲ್ಲಿ ಜೈಸ್ವಾಲ್ ಮತ್ತು ಗಂಭೀರ್ ನಂತರದ ಸ್ಥಾನದಲ್ಲಿ ಮಾಜಿ ಬ್ಯಾಟ್ಸ್‌ಮನ್ ಸೌರವ್ ಗಂಗೂಲಿ ಇದ್ದಾರೆ. ಗಂಗೂಲಿ 1997ರಲ್ಲಿ 848, 2002ರಲ್ಲಿ 945 ಮತ್ತು 2007ರಲ್ಲಿ 1107 ರನ್ ಗಳಿಸಿದ್ದರು.
2024ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಜೋ ರೂಟ್‌ಗಿಂತಲೂ ಹಿಂದೆ ಇದ್ದಾರೆ. ರೂಟ್ ಈ ವರ್ಷ 1338 ರನ್ ಗಳಿಸಿದ್ದಾರೆ.
ಪಾಕ್ ಆಟಗಾರನ ದಾಖಲೆ ಮುರಿಯುವ ಸುವರ್ಣವಕಾಶ: ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ದಾಖಲೆ ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಹೆಸರಲ್ಲಿದೆ. ಆದರೇ ಈ ದಾಖಲೆ ಮುರಿಯಲು ಜೈಸ್ವಾಲ್ಗೆ ಉತ್ತಮ ಅವಕಾಶವಿದೆ. ಯೂಸುಫ್ 2006ರಲ್ಲಿ ಒಂಬತ್ತು ಶತಕ ಮತ್ತು ಮೂರು ಅರ್ಧಶತಕಗಳ ಸಹಾಯದಿಂದ 1788 ರನ್ ಗಳಿಸಿದ್ದರು. ಈ ದಾಖಲೆ ಮುರಿಯಲು ಇನ್ನೂ 652 ರನ್ಗಳು ಬೇಕಾಗಿವೆ. ಆಸೀಸ್ ವಿರುದ್ಧ ಇನ್ನೂ ನಾಲ್ಕು ಟೆಸ್ಟ್ ಪಂದ್ಯಗಳು ಬಾಕಿ ಇರುವುದರಿಂದ ಜೈಸ್ವಾಲ್ಗೆ ಈ ದಾಖಲೆ ಮುರಿಯಲು ಸುವರ್ಣಾವಕಾಶ ಇದೆ.
ಇದನ್ನೂ ಓದಿ:T20ಯಲ್ಲಿ ಮತ್ತೊಂದು ದಾಖಲೆ ಬರೆದ ತಿಲಕ್ ವರ್ಮಾ: ಇದು 20 ವರ್ಷದ ಕ್ರಿಕೆಟ್ ಇತಿಹಾಸದಲ್ಲೇ ಮೊದಲು!