Ind vs Aus, 5th Test:ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಮೈದಾನದಲ್ಲಿ ಇಂದಿನಿಂದ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟೆಸ್ಟ್ನಲ್ಲೂ ಭಾರತದ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗಿಳಿದ ಟೀಂ ಇಂಡಿಯಾ, 120 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಕೆ.ಎಲ್.ರಾಹುಲ್, ಯಶಸ್ವಿ ಜೈಸ್ವಾಲ್, ಪಂತ್, ನಿತೀಶ್ ಕುಮಾರ್ ರೆಡ್ಡಿ ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದ್ದಾರೆ.
ರೋಹಿತ್ ಶರ್ಮಾ ಐದನೇ ಟೆಸ್ಟ್‌ನಿಂದ ಹಿಂದೆ ಸರಿದ ಕಾರಣ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಕೆ.ಎಲ್.ರಾಹುಲ್ ಇನ್ನಿಂಗ್ಸ್ ಆರಂಭಿಸಿದರು. ಓಪನರ್ ಆಗಿ ಬಂದ ಅವಕಾಶವನ್ನು ರಾಹುಲ್ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೇವಲ 4 ರನ್ ಗಳಿಸಿ ಅವರು ಪೆವಿಲಿಯನ್ ಹಾದಿ ಹಿಡಿದರು.
ಏಳನೇ ಓವರ್‌ನಲ್ಲಿ ಟೀಂ ಇಂಡಿಯಾಗೆ ಮೊತ್ತೊಂದು ದೊಡ್ಡ ಆಘಾತ ಎದುರಾಯಿತು. ನಾಲ್ಕನೇ ಟೆಸ್ಟ್‌ನಲ್ಲಿ ಭರ್ಜರಿ ಬ್ಯಾಟ್ ಮಾಡಿದ್ದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಬೋಲ್ಯಾಂಡ್ ಬೌಲಿಂಗ್‌ನಲ್ಲಿ ವೆಬ್‌ಸ್ಟರ್‌ಗೆ ಕ್ಯಾಚಿತ್ತರು. ಅಲ್ಲದೇ ರೋಹಿತ್ ಶರ್ಮಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಶುಭಮನ್ ಗಿಲ್ ಕೂಡ ನಿರಾಸೆ ಮೂಡಿಸಿದರು.
17 ರನ್ ಗಳಿಸಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ: ನಾಥನ್ ಲಿಯಾನ್ ಬೌಲಿಂಗ್‌ನಲ್ಲಿ ಗಿಲ್, ಸ್ಮಿತ್ಗೆ ಕ್ಯಾಚಿತ್ತರು. ಇದರೊಂದಿಗೆ ಕೇವಲ 20 ರನ್ ಗಳಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ವಿರಾಟ್ ಕೊಹ್ಲಿ ಅವರದ್ದು ಅದೇ ರಾಗ ಅದೇ ತಾಳ ಎಂಬಂತೆ ಮತ್ತೊಮ್ಮೆ ಆಫ್ ಸೈಡ್ ಬೌಲಿಂಗ್ಗೆ ವಿಕೆಟ್ ನೀಡಿದರು. ಈ ಪಂದ್ಯದಲ್ಲಾದರೂ ಭಾರತಕ್ಕೆ ಆಸರೆಯಾಗುತ್ತಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಕೊಹ್ಲಿ ಕೇವಲ 17 ರನ್ಗೆ ತಮ್ಮ ಇನ್ನಿಂಗ್ಸ್ ಮುಕ್ತಾಯಗೊಳಿಸಿದರು. ಇದರೊಂದಿಗೆ ಸ್ಕೋರ್ 72 ರನ್ ತಲುಪುವಷ್ಟರಲ್ಲೇ ಭಾರತ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು.
ಇದಾದ ಬಳಿಕ ರಿಷಬ್ ಪಂತ್ ಹಾಗೂ ಜಡೇಜಾ ಸೇರಿ ರನ್ ಕಲೆಹಾಕಲು ಪ್ರಾರಂಭಿಸಿದರು. ಈ ಇಬ್ಬರ ಬ್ಯಾಟಿಂಗ್ ನೆರವಿನಿಂದ 52 ಓವರ್ ಮುಕ್ತಾಯದ ವೇಳೆಗೆ ಭಾರತದ ಸ್ಕೋರ್ 114/4 ಆಗಿತ್ತು. ಆದರೆ 40 ರನ್ ಗಳಿಸಿದ್ದ ಪಂತ್ 56ನೇ ಓವರ್‌ನಲ್ಲಿ ಬೊಲ್ಯಾಂಡ್ ಎಸೆದ 4ನೇ ಎಸೆತದಲ್ಲಿ ಅನವಶ್ಯಕ ಶಾಟ್‌ಗೆ ಕೈ ಹಾಕಿ ಕಮಿನ್ಸ್ಗೆ ಕ್ಯಾಚ್ ನೀಡಿದರು.
ಬಳಿಕ ಬಂದ ನಿತೀಶ್ ರೆಡ್ಡಿ ಕೂಡ ಬೊಲ್ಯಾಂಡ್ನ 6ನೇ ಎಸೆತದಲ್ಲೇ ಸ್ಮಿತ್ಗೆ ಕ್ಯಾಚ್ ನೀಡಿ ಶೂನ್ಯ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಭಾರತ 57ನೇ ಓವರ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 120 ರನ್ ಕಲೆ ಹಾಕಿದೆ. ಸದ್ಯ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಈ ಸರಣಿಯಲ್ಲಿ ಆಸೀಸ್ ತಂಡ 2-1 ಅಂತರದ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ಈ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸುವುದರ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಸ್ ಫೈನಲ್ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಭಾರತ ಯೋಜನೆ ರೂಪಿಸಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾ ಆಟಗಾರರು ಗುಲಾಬಿ ಬಣ್ಣದ ಜೆರ್ಸಿ ಧರಿಸಿ ಆಡುತ್ತಿರುವುದೇಕೆ?