ಸೇಂಟ್ ಲೂಸಿಯಾ: ಇಲ್ಲಿನ ಡರೆನ್ ಸಮಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿಂದು ಟಿ20 ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಎದುರಾಗಲಿವೆ. ಈ ಹಿಂದಿನ ಎರಡು ಐಸಿಸಿ ಇವೆಂಟ್ಗಳ ಫೈನಲ್ಗಳಲ್ಲಿ ಟೀಂ ಇಂಡಿಯಾಕ್ಕೆ ಮಾರಕವಾಗಿರುವ ಆಸೀಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ರೋಹಿತ್ ಪಡೆಗಿಂದು ಸುವರ್ಣಾವಕಾಶವಿದೆ.
ಚುಟುಕು ಕ್ರಿಕೆಟ್ ಟೂರ್ನಿಯ ಸೂಪರ್-8 ಹಂತದಲ್ಲಿ ಎರಡೂ ತಂಡಗಳಿಗೆ ಕೊನೆಯ ಪಂದ್ಯವಾಗಿದ್ದು, ಭಾರತ ಗೆದ್ದರೆ ಸೆಮಿಫೈನಲ್ಗೆ ತಲುಪಲಿದೆ. ಇನ್ನೊಂದೆಡೆ, ಆಸ್ಟ್ರೇಲಿಯಾ ಗೆದ್ದರೂ ಕೂಡ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳ ನಡುವಿನ ಹಣಾಹಣಿಯ ಫಲಿತಾಂಶದ ಮೇಲೆ ಸೆಮಿಫೈನಲ್ ಹಾದಿ ನಿರ್ಧಾರವಾಗಲಿದೆ.
ಟೂರ್ನಿಯಲ್ಲಿ ಭಾರತ ತಂಡ ಅಜೇಯ ಗೆಲುವಿನ ಓಟ ಮುಂದುವರೆಸಿದ್ದರೆ, ಆಸ್ಟ್ರೇಲಿಯಾ ಈ ಹಿಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋತು, ಟೂರ್ನಿಯಿಂದ ಹೊರಬೀಳುವ ಭೀತಿ ಎದುರಿಸುತ್ತಿದೆ. ಒಂದು ವೇಳೆ ಮಳೆ ಬಂದು ಪಂದ್ಯಕ್ಕೆ ಅಡ್ಡಿಯುಂಟಾದರೆ, ಕಾಂಗರೂ ಪಡೆಯು ಸಂಕಷ್ಟಕ್ಕೆ ಸಿಲುಕಲಿದೆ. ಒಂದು ವೇಳೆ ಹೀಗಾದರೆ, ಬಾಂಗ್ಲಾ ವಿರುದ್ಧ ಗೆದ್ದು ಮುಂದಿನ ಹಂತಕ್ಕೇರುವ ಅವಕಾಶ ಅಫ್ಘಾನಿಸ್ತಾನಕ್ಕೆ ಸಿಗಲಿದೆ.
ಸೇಡಿನ ತವಕದಲ್ಲಿ ಭಾರತ:ಈ ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಹಾಗೂ ಅದಕ್ಕೂ ಮುನ್ನ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಮುಳುವಾಗಿತ್ತು. ಎರಡೂ ಟ್ರೋಫಿಗಳನ್ನು ಗೆದ್ದಿರುವ ಆಸೀಸ್ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತಕ್ಕಿಂದು ಅವಕಾಶವಿದೆ. ಆಸ್ಟ್ರೇಲಿಯಾವನ್ನು ರೋಹಿತ್ ಪಡೆಯು ಭಾರಿ ಅಂತರದಿಂದ ಸೋಲಿಸಿದರೆ, ಟೂರ್ನಿಯಿಂದ ಹೊರಗಟ್ಟಬಹುದಾಗಿದೆ. ಇಂದಿನ ಪಂದ್ಯದಲ್ಲಿ ಭಾರತ ಸೋತರೆ, ರನ್ರೇಟ್ ಲೆಕ್ಕಾಚಾರ ಮುನ್ನೆಲೆಗೆ ಬರಲಿದೆ. +2.425 ರನ್ ದರ ಹೊಂದಿರುವ ರೋಹಿತ್ ಪಡೆಯು ಸೆಮಿಫೈನಲ್ಗೇರಲು ಹೆಚ್ಚಿನ ಅವಕಾಶ ಹೊಂದಿದೆ.
ಹೀಗಿದೆ ಪಾಯಿಂಟ್ಸ್ ಲೆಕ್ಕಾಚಾರ:ಸೂಪರ್-8 ಗ್ರೂಪ್ 1ರಲ್ಲಿ ಭಾರತ ಎರಡೂ ಪಂದ್ಯಗಳನ್ನು ಜಯಿಸಿ, 4 ಅಂಕಗಳೊಂದಿಗೆ (+2.425) ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ, ಆಸೀಸ್ ತಲಾ ಒಂದು ಗೆಲುವು ಹಾಗೂ ಸೋಲಿನೊಂದಿಗೆ ಎರಡು ಅಂಕಗಳೊಂದಿಗೆ (+0.223) 2ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಎರಡರಲ್ಲಿ ಒಂದು ಪಂದ್ಯ ಗೆದ್ದಿರುವ ಅಫ್ಘಾನಿಸ್ತಾನ ಮೂರನೇ ಸ್ಥಾನ ಪಡೆದಿದೆ. ಆದರೆ, ಅವರ ರನ್ರೇಟ್ -0.650 ಆಗಿದ್ದು, ಬಾಂಗ್ಲಾದೇಶ (-2.489) ಎರಡೂ ಪಂದ್ಯಗಳನ್ನು ಸೋತು ಟೂರ್ನಿಯಿಂದ ಹೊರಬೀಳುವ ಅಂಚಿನಲ್ಲಿದೆ.