ಪ್ಯಾರಿಸ್ (ಫ್ರಾನ್ಸ್):ಒಲಿಂಪಿಕ್ಸ್ನ ಇಂದಿನ ಪೋಲ್ ಬಿ ಹಾಕಿ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತ 2-0 ಅಂತರದಿಂದ ಗೆಲವು ಸಾಧಿಸಿದೆ. ಇದರೊಂದಿಗೆ ಬಹು ರಾಷ್ಟ್ರೀಯ ಕ್ರೀಡಾಕೂಟದಲ್ಲಿ 2ನೇ ಗೆಲುವು ದಾಖಲಿಸಿದೆ.
ಪಂದ್ಯ ಆರಂಭದ ಮೊದಲ ನಿಮಿಷದಲ್ಲೇ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ ಅದನ್ನು ಗೋಲಾಗಿ ಪರಿವರ್ತಿಸಲು ಟೀಂ ಇಂಡಿಯಾ ಆಟಗಾರರಿಗೆ ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ ಟೀಂ ಇಂಡಿಯಾ ಆಟಗಾರರು ನಿರಂತರ ದಾಳಿ ನಡೆಸಿದರು. ಬಳಿಕ 11ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಮೂಲಕ ಭಾರತ ಮೊದಲ ಗೋಲು ಗಳಿಸಿತು. ಈ ಬಾರಿ ಚೆಂಡನ್ನು ನೆಟ್ಗೆ ದೂಡುವಲ್ಲಿ ನಾಯಕ ಹರ್ಮನ್‌ಪ್ರೀತ್ ಯಾವುದೇ ತಪ್ಪು ಮಾಡಲಿಲ್ಲ.
ನಂತರ 19ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಅವರ ಬುಲೆಟ್ ಸ್ಟ್ರೋಕ್ ಐರಿಶ್ ಡಿಫೆಂಡರ್‌ನ ಸ್ಟಿಕ್‌ನಿಂದ ಡಿಫ್ಲೆಡ್ ಆಗಿ ಗೋಲು ಲಭಿಸಿತು. ಈ ಪಂದ್ಯದಲ್ಲಿ ಭಾರತಕ್ಕೆ ಒಟ್ಟು ಒಂಬತ್ತು ಪೆನಾಲ್ಟಿ ಕಾರ್ನರ್ ಅವಕಾಶಗಳು ಸಿಕ್ಕಿದ್ದವು. ಇದರಲ್ಲಿ ಒಂದರಲ್ಲಿ ಮಾತ್ರ ಗೋಲುಗಳಿಸಲು ಸಾಧ್ಯವಾಯಿತು.
ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2 ಅಂತರ ಗೆದ್ದಿದ್ದ ಭಾರತ, ಆ ಬಳಿಕ ಅರ್ಜೆಂಟೀನಾ ವಿರುದ್ಧದ ಪಂದ್ಯ 1-1 ಅಂತರದಿಂದ ಡ್ರಾನಲ್ಲಿ ಕೊನೆಗೊಳಿಸಿತು. ಇದೀಗ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಹರ್ಮನ್‌ಪ್ರೀತ್ ಕೌರ್ ಎರಡು ಗೋಲು ಕಲೆಹಾಕುವ ಮೂಲಕ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಜತೆಗೆ ಈ ಒಲಿಂಪಿಕ್ಸ್ನಲ್ಲಿ ಭಾರತದ ಪರ ಅತೀ ಹೆಚ್ಚು ಗೋಲು ಗಳಿಸಿರುವ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅವರು ಈವರೆಗೂ ಆಡಿದ ಮೂರು ಪಂದ್ಯಗಳಲ್ಲಿ ಒಟ್ಟು 4 ಗೋಲು ಗಳಿಸಿದ್ದಾರೆ. ವಿಶೇಷವೆಂದರೇ ಹರ್ಮನ್‌ಪ್ರೀತ್ ಎಲ್ಲಾ ಮೂರು ಪಂದ್ಯಗಳಲ್ಲಿ ಗೋಲು ಗಳಿಸಿದ್ದಾರೆ.
ಸದ್ಯ 3 ಪಂದ್ಯಗಳಲ್ಲಿ ಒಟ್ಟು 7 ಅಂಕಗಳನ್ನು ಕಲೆಹಾಕಿರುವ ಭಾರತ ಪೂಲ್ ಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಉಳಿದಂತೆ ಬೆಲ್ಜಿಯಂ ಎರಡನೇ ಮತ್ತು ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಎರಡೂ ತಂಡಗಳು 6 - 6 ಅಂಕಗಳನ್ನು ಹೊಂದಿವೆ. ಅರ್ಜೆಂಟೀನಾ 1 ಅಂಕದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ಇನ್ನು ಖಾತೆ ತೆರೆಯಲಾಗಿಲ್ಲ. ಎರಡೂ ತಂಡಗಳು ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿವೆ.
ಇದನ್ನೂ ಓದಿ:ಒಂದೇ ಒಲಿಂಪಿಕ್ನಲ್ಲಿ ಎರಡು ಪದಕ ಪಡೆದ ಏಕೈಕ ಕ್ರೀಡಾಪಟು; ಶೂಟಿಂಗ್ನಲ್ಲಿ ಇತಿಹಾಸ ಬರೆದ ಮನು ಭಾಕರ್ - Paris Olympics 2024