ಬ್ಲೋಮ್‌ಫಾಂಟೈನ್ (ದಕ್ಷಿಣ ಆಫ್ರಿಕಾ): ಹಾಲಿ ಚಾಂಪಿಯನ್ ಭಾರತೀಯ ಅಂಡರ್-19 ಕ್ರಿಕೆಟ್ ತಂಡ ಶನಿವಾರ ದಕ್ಷಿಣ ಆಫ್ರಿಕಾದ ಬ್ಲೋಮ್‌ಫಾಂಟೈನ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಉದಯ್ ಸಹಾರನ್ ನೇತೃತ್ವದ ತಂಡ, ಗೆಲುವಿನ ಶುಭಾರಂಭ ಮಾಡುವ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ, ಬಾಂಗ್ಲಾದೇಶ ಕೂಡ ಇದಕ್ಕೆ ದಿಟ್ಟ ಉತ್ತರ ನೀಡುವ ಹುಮ್ಮಸ್ಸಿನಲ್ಲಿದೆ.
ಭಾರತದ ಪುಟಾಣಿ ತಂಡ ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ತಂಡದಲ್ಲಿ ಐರ್ಲೆಂಡ್ ಮತ್ತು ಅಮೆರಿಕ ತಂಡಗಳಿವೆ. ಬಿ ಗುಂಪಿನಲ್ಲಿ ಇಂಗ್ಲೆಂಡ್, ಆತಿಥೇಯ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ತಂಡಗಳಿವೆ. ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಸಿ ಗುಂಪಿನಲ್ಲಿವೆ. ಇದೇ ವೇಳೆ ಡಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ನೇಪಾಳ ತಂಡಗಳು ಸ್ಥಾನ ಪಡೆದಿವೆ. ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಮುನ್ನಡೆಯಲಿವೆ. ಸೂಪರ್ ಸಿಕ್ಸ್ ಹಂತಕ್ಕೂ ಮುನ್ನ ಭಾರತೀಯ ಅಂಡರ್-19 ಕ್ರಿಕೆಟ್ ತಂಡ ಗೆಲುವಿನ ಶುಭಾರಂಭ ಮಾಡಬೇಕಿದೆ.
ಭಾರತ ಯುವ ತಂಡವು 2002ರಲ್ಲಿ ಮೊಹಮ್ಮದ್ ಕೈಫ್ ನೇತೃತ್ವದಲ್ಲಿ ಮೊದಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಆ ಬಳಿಕ ಭಾರತೀಯ ತಂಡವು 2008, 2012, 2018 ಮತ್ತು 2022ರಲ್ಲಿ ಅಂಡರ್ 19 ವಿಶ್ವಕಪ್ ಗೆದ್ದು ದಾಖಲೆ ನಿರ್ಮಿಸಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು, 4 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್‌ಗೆ ಅರ್ಹತೆ ಪಡೆಯಲಿವೆ. ಫೆಬ್ರವರಿ 6 ಮತ್ತು 8 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 11 ರಂದು ಬೆನೋನಿಯಲ್ಲಿ ಫೈನಲ್ ಪಂದ್ಯ ನಡೆಯಲಿದೆ. ದಕ್ಷಿಣ ಆಫ್ರಿಕಾದ 5 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಪ್ರಾರಂಭವಾಗುತ್ತವೆ.