ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ತವರಿನ ಟೆಸ್ಟ್, ಏಕದಿನ ಹಾಗೂ ಟಿ-20 ಸರಣಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಘೋಷಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಗೂ ಮುನ್ನವೇ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳೊಂದಿಗೆ ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ.
ಸೆಪ್ಟೆಂಬರ್ 19ರಿಂದ ಫೆಬ್ರವರಿ 12ರವರೆಗೆ ಪುರುಷರ ಹಿರಿಯ ಕ್ರಿಕೆಟ್ ತಂಡದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್, 3 ಟಿ-20, ನ್ಯೂಜಿಲ್ಯಾಂಡ್ ವಿರುದ್ಧ 3 ಟೆಸ್ಟ್, ಇಂಗ್ಲೆಂಡ್ ವಿರುದ್ಧ 5 ಟಿ-20 ಹಾಗೂ 3 ಏಕದಿನ ಪಂದ್ಯಗಳು ನಿಗದಿಯಾಗಿವೆ. ಆರಂಭದಲ್ಲಿ ಚೆನ್ನೈ, ಕಾನ್ಪುರದಲ್ಲಿ ಬಾಂಗ್ಲಾದೇಶದ ವಿರುದ್ಧ 2 ಟೆಸ್ಟ್ಗಳನ್ನು ಟೀಂ ಇಂಡಿಯಾ ಆಡಲಿದೆ. ನಂತರದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯು ಬೆಂಗಳೂರು, ಪುಣೆ ಹಾಗೂ ಮುಂಬೈನಲ್ಲಿ ನಡೆಯಲಿದೆ. ಈ 5 ಟೆಸ್ಟ್ ಪಂದ್ಯಗಳೊಂದಿಗೆ ಭಾರತವು 8 ಟಿ-20 ಹಾಗೂ 3 ಏಕದಿನ ಪಂದ್ಯಗಳಿಗೂ ಆತಿಥ್ಯ ವಹಿಸಲಿದೆ.
ತವರಿನಲ್ಲಿ ಒಟ್ಟು 8 ಟಿ-20 ಪಂದ್ಯಗಳ ಪೈಕಿ 3 ಪಂದ್ಯಗಳು ಬಾಂಗ್ಲಾ ಹಾಗೂ ಉಳಿದ 5 ಪಂದ್ಯಗಳು ಇಂಗ್ಲೆಂಡ್ನೊಂದಿಗೆ ನಡೆಯಲಿದೆ. ಜೊತೆಗೆ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನೂ ಆಯೋಜಿಸಲಾಗಿದೆ. ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದೊಂದಿಗೆ ಟೀಂ ಇಂಡಿಯಾದ ತವರಿನ ಸರಣಿ ಮುಕ್ತಾಯವಾಗಲಿದೆ. ನಂತರ ತಂಡವು ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಹೊರಡಬೇಕಿದೆ.
ಆದರೆ, ರೋಹಿತ್ ಶರ್ಮಾ ನೇತೃತ್ವದ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವ ಸಾಧ್ಯತೆ ಕಡಿಮೆ. ಆದ್ದರಿಂದ ಈ ಸರಣಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯುವ ನಿರೀಕ್ಷೆಯಿದೆ. ಎಂದರೆ, ಕೆಲ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಸಿದರೆ, ಭಾರತಕ್ಕೆ ಸಂಬಂಧಿಸಿದ ಪಂದ್ಯಗಳು ಬೇರೆಡೆ ಆಯೋಜಿಸುವ ಪ್ರಮೇಯ ಬರಲಿದೆ. ಚಾಂಪಿಯನ್ಸ್ ಟ್ರೋಫಿ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಭಾರತವು ಏಳು ವಾರಗಳ ಕಾಲ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.