ನ್ಯೂಯಾರ್ಕ್ (ಯುಎಸ್):ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ನೆರೆಯ ಪಾಕಿಸ್ತಾನದ ವಿರುದ್ಧ ಭಾರತ ತಂಡದ ಪ್ರಾಬಲ್ಯ ಮುಂದುವರೆದಿದೆ. ಭಾನುವಾರ ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಕರಾರುವಾಕ್ ಬೌಲಿಂಗ್ನಿಂದ ಸಾಂಪ್ರದಾಯಿಕ ಎದುರಾಳಿಯನ್ನು ಬಗ್ಗುಬಡಿದ ಟೀಂ ಇಂಡಿಯಾ, 6 ರನ್ಗಳ ಜಯ ದಾಖಲಿಸಿದೆ. ಟೂರ್ನಿಯಲ್ಲಿ ಅತ್ಯಲ್ಪ ಮೊತ್ತವನ್ನು ಡಿಫೆಂಡ್ ಮಾಡಿದ ದಾಖಲೆಗೆ ಭಾರತ ಸೇರ್ಪಡೆಯಾಗಿದೆ.
ಮಳೆಯಿಂದ ಸ್ವಲ್ಪ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ರೋಹಿತ್ ಪಡೆಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಮಳೆಯ ವಾತಾವರಣ ಹಾಗೂ ಅನಿಯಮಿತ ಬೌನ್ಸ್ನ ಪಿಚ್ನಲ್ಲಿ ರನ್ ಗಳಿಸುವುದು ಸುಲಭವಿರಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 4 ರನ್ ಗಳಿಸಿದ್ದ ಕೊಹ್ಲಿ ನಶೀಮ್ ಶಾ ಬೌಲಿಂಗ್ನಲ್ಲಿ ಉಸ್ಮಾನ್ ಖಾನ್ಗೆ ಸುಲಭದ ಕ್ಯಾಚ್ ನೀಡಿ ಔಟಾದರು. ಬಳಿಕ ರೋಹಿತ್ (13) ಕೂಡ 3ನೇ ಓವರ್ನಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಪೆವಿಲಿಯನ್ಗೆ ಮರಳಿದರು.
ತದನಂತರ ಒಂದಾದ ಅಕ್ಷರ್ ಪಟೇಲ್ (20) ಹಾಗೂ ರಿಷಭ್ ಪಂತ್ (42) ಜೊತೆಯಾಟದ ಭರವಸೆ ಮೂಡಿಸಿದರು. ಆದರೆ, ರನ್ ಗತಿ ಹೆಚ್ಚಿಸುವ ಯತ್ನದಲ್ಲಿ ವಿಫಲರಾದ ಅಕ್ಷರ್, ನಶೀಮ್ ಎಸೆತದಲ್ಲಿ ಬೌಲ್ಡ್ ಆಗಿ ಹೊರನಡೆದರು. 10 ಓವರ್ಗಳ ಬಳಿಕ 3 ವಿಕೆಟ್ಗೆ 81 ರನ್ ಕಲೆ ಹಾಕಿದ್ದ ಭಾರತ ಉತ್ತಮ ಸ್ಥಿತಿಯಲ್ಲಿತ್ತು. ಈ ವೇಳೆ 12ನೇ ಓವರ್ನಲ್ಲಿ ಸೂರ್ಯಕುಮಾರ್ ಯಾದವ್ (7) ಔಟಾಗುತ್ತಿದ್ದಂತೆ ದಿಢೀರ್ ಕುಸಿತದ ಹಾದಿ ಹಿಡಿಯಿತು.
ಬಳಿಕ ಬ್ಯಾಟಿಂಗ್ಗೆ ಬಂದ ಶಿವಂ ದುಬೆ 9 ಬಾಲ್ಗಳಲ್ಲಿ ಕೇವಲ 3 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಈ ನಡುವೆ ಉತ್ತಮ ಆಟವಾಡುತ್ತಿದ್ದ ಪಂತ್ (42) ಕೂಡ ದೊಡ್ಡ ಹೊಡೆತಕ್ಕೆ ಯತ್ನಿಸಿ ಅಮಿರ್ಗೆ ಬಲಿಯಾದರು. ತದನಂತರ, ರವೀಂದ್ರ ಜಡೇಜಾ ಶೂನ್ಯ, ಹಾರ್ದಿಕ್ ಪಾಂಡ್ಯ 7 ರನ್ ಹಾಗೂ ಬುಮ್ರಾ ಖಾತೆ ತೆರೆಯದೇ ವಾಪಸ್ ಆದರು. ಕೊನೆಯಲ್ಲಿ ಅರ್ಶದೀಪ್ 9 ಹಾಗೂ ಸಿರಾಜ್ 7 ರನ್ ಗಳಿಸಿದ್ದು, ಭಾರತ 119 ರನ್ಗೆ ಆಲೌಟ್ ಆಯಿತು. ಪಾಕ್ ಪರ ನಶೀಮ್ ಶಾ 21ಕ್ಕೆ 3 ಹಾಗೂ ಅಮಿರ್ 23ಕ್ಕೆ 2 ವಿಕೆಟ್ ಪಡೆದು ಭಾರತವನ್ನು ನಿಯಂತ್ರಿಸಿದರು.
ಪಾಕಿಸ್ತಾನದ ಇನ್ನಿಂಗ್ಸ್:120 ರನ್ ಬೆನ್ನಟ್ಟಿದ ಪಾಕ್ ತಂಡ ನಿಧಾನಗತಿಯ ಆಟಕ್ಕೆ ಮೊರೆ ಹೋಯಿತು. 4.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 26 ರನ್ ಕಲೆಹಾಕಿತ್ತು. ಈ ವೇಳೆ ನಾಯಕ ಬಾಬರ್ (13) ಬ್ಯಾಟ್ ಸವರಿಕೊಂಡು ಬಂದ ಬಾಲ್ನ್ನು ಸ್ಲಿಪ್ನಲ್ಲಿ ಸೂರ್ಯಕುಮಾರ್ ಯಾದವ್ ಸುರಕ್ಷಿತವಾಗಿ ಹಿಡಿದಿದ್ದರಿಂದ ಭಾರತಕ್ಕೆ ಬುಮ್ರಾ ಮೊದಲ ಮೇಲುಗೈ ಒದಗಿಸಿದರು. ಬಳಿಕ ಉಸ್ಮಾನ್ ಖಾನ್ (13) ಹಾಗೂ ಮೊಹಮದ್ ರಿಜ್ವಾನ್ (31) ಜೊತೆಯಾಟದ ಮುನ್ಸೂಚನೆ ನೀಡಿದರೂ ರನ್ ಗತಿ ಹೆಚ್ಚಿಸುವಲ್ಲಿ ವಿಫಲರಾದರು.