ಧರ್ಮಶಾಲಾ (ಹಿಮಾಚಲ ಪ್ರದೇಶ): ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 64 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟೆಸ್ಟ್ ಸರಣಿಯನ್ನು 4-1 ಅಂತರದಿಂದ ತನ್ನ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತವು 68.5 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಏರಿದೆ.
ಧರ್ಮಶಾಲಾ ಕ್ರಿಕೆಟ್ ಮೈದಾನದಲ್ಲಿ ಮಾರ್ಚ್ 7ರಂದು ಆರಂಭವಾಗಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಪಂದ್ಯ ಕೇವಲ ಮೂರೇ ದಿನಗಳಲ್ಲಿ ಮುಕ್ತಾಯವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡಿದ್ದ ಆಂಗ್ಲರು ತಮ್ಮ ಮೊದಲ ಇನ್ನಿಂಗ್ಸ್ ಅನ್ನು 218 ರನ್ಗಳಿಗೆ ಮುಗಿಸಿದ್ದರು. ಬಳಿಕ ರೋಹಿತ್ ಶರ್ಮಾ ಬಳಗ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 477 ರನ್ಗಳನ್ನು ಕಲೆ ಹಾಕಿ 259 ರನ್ಗಳ ಮುನ್ನಡೆ ಸಾಧಿಸಿತ್ತು.
ಮತ್ತೊಂದೆಡೆ, ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಸ್ಟಾರ್ ಸ್ಪಿನರ್ ಆರ್.ಅಶ್ವಿನ್ ದಾಳಿಗೆ ಸಿಲುಕಿ ಬೇಗ ವಿಕೆಟ್ ಕಳೆದುಕೊಂಡಿತು. ಇದರಿಂದಾಗಿ ಮೂರನೇ ದಿನದಾಟದಲ್ಲಿ ಕೇವಲ 195 ರನ್ಗಳಿಗೆ ಆಂಗ್ಲರ ಪಡೆ ಸರ್ವಪತನ ಕಂಡು ಇನ್ನಿಂಗ್ಸ್ ಮತ್ತು 64 ರನ್ಗಳ ಅಂತರದಿಂದ ಸೋಲು ಅನುಭವಿಸಿತು.
ಅಶ್ವಿನ್, ಕುಲ್ದೀಪ್ ಮಿಂಚು:ಆಂಗ್ಲರ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನರ್ ರವಿಚಂದ್ರನ್ ಅಶ್ವಿನ್ ಮತ್ತು ಕುಲ್ದೀಪ್ ಯಾದವ್ ಮಿಂಚು ಹರಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಕುಲ್ದೀಪ್ ಐದು ವಿಕೆಟ್ಗಳು, ಅಶ್ವಿನ್ ನಾಲ್ಕು ವಿಕೆಟ್ಗಳನ್ನು ಕಿತ್ತು ಬ್ಯಾಟರ್ಗಳನ್ನು ಕಾಡಿದ್ದರು. ಇದರಿಂದ ಇಂಗ್ಲೆಂಡ್ ತಂಡವನ್ನು 218 ರನ್ಗಳಿಗೆ ಕಟ್ಟಿ ಹಾಕಲು ಸಾಧ್ಯವಾಗಿತ್ತು.