ಕರ್ನಾಟಕ

karnataka

ETV Bharat / sports

ದುಲೀಪ್ ಟ್ರೋಫಿ: ಶುಭ್ಮನ್​ ಗಿಲ್​ ಪಡೆಗೆ ಸೋಲು; ಇಂಡಿಯಾ ಬಿ ಶುಭಾರಂಭ - Duleep Trophy - DULEEP TROPHY

ದುಲೀಪ್ ಟ್ರೋಫಿ ಕ್ರಿಕೆಟ್ ​ಟೂರ್ನಿಯಲ್ಲಿ ಇಂಡಿಯಾ ಬಿ ತಂಡ‌ ಗೆಲುವಿನ ಆರಂಭ ಪಡೆದಿದೆ. ಅಭಿಮನ್ಯು ಈಶ್ವರನ್​ ನೇತೃತ್ವದ ಇಂಡಿಯಾ ಬಿ ತಂಡ, ಶುಭ್ಮನ್ ಗಿಲ್ ಮುಂದಾಳತ್ವದ ಇಂಡಿಯಾ ಎ ತಂಡವನ್ನು ಸೋಲಿಸಿತು.

Duleep Trophy
ದುಲೀಪ್ ಟ್ರೋಫಿಯಲ್ಲಿ ಶುಭ್‌ಮನ್ ಗಿಲ್,​ ಯಶ್ ದಯಾಳ್ (BCCI Domestic X Handle)

By ETV Bharat Karnataka Team

Published : Sep 8, 2024, 5:11 PM IST

ಬೆಂಗಳೂರು:ದುಲೀಪ್ ಟ್ರೋಫಿ ಕ್ರಿಕೆಟ್​ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಡಿಯಾ ಎ ವಿರುದ್ಧ ಜಯ ಸಾಧಿಸುವ ಮೂಲಕ ಇಂಡಿಯಾ ಬಿ ತಂಡ‌ ಶುಭಾರಂಭ ಮಾಡಿದೆ. ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಡಿಯಾ ಎ ತಂಡದ ವಿರುದ್ಧ ಇಂಡಿಯಾ ಬಿ ತಂಡ ಇಂದು 76 ರನ್‌ಗಳ ಜಯ ದಾಖಲಿಸಿತು. ಇದರೊಂದಿಗೆ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.

ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 150 ರನ್‌ ಗಳಿಸಿದ್ದ ಇಂಡಿಯಾ ಬಿ ತಂಡ ನಾಲ್ಕನೇ ದಿನ ಹೆಚ್ಚು ಹೊತ್ತು ಬ್ಯಾಟಿಂಗ್​ ಮಾಡಲಿಲ್ಲ. ಆಕಾಶ್ ದೀಪ್ ಬಿಗುವಿನ ದಾಳಿಗೆ ಸಿಲುಕಿದ ಇಂಡಿಯಾ ಬಿ, 42 ಓವರ್‌ಗಳಲ್ಲಿ 184 ರನ್‌ಗಳಿಗೆ ಆಲೌಟ್ ಆಯಿತು. ಆ ಮೂಲಕ‌ ಇಂಡಿಯಾ ಎ ತಂಡದ ಗೆಲುವಿಗೆ 275 ರನ್‌ಗಳ ಗುರಿ ನೀಡಿತು.

ಇಂಡಿಯಾ ಎ ಬ್ಯಾಟಿಂಗ್​:ಗುರಿ ಬೆನ್ನಟ್ಟಿದ ಶುಭ್ಮನ್ ಗಿಲ್ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟರ್​​ ಮಯಾಂಕ್ ಅಗರ್ವಾಲ್ (3) ಬೇಗನೆ ವಿಕೆಟ್ ಒಪ್ಪಿಸಿದರೆ, ಶುಭ್ಮನ್ 21 ರನ್‌ಗೆ ಔಟಾದರು. ಈ ಹಂತದಲ್ಲಿ ಬಿರುಸಿನ ಆಟಕ್ಕೆ ಮೊರೆ ಹೋದ ರಿಯಾನ್ ಪರಾಗ್ (31) ಸಹ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಬಳಿಕ ಧ್ರುವ ಜುರೆಲ್​ ಹಾಗೂ ತನುಶ್​ ಕೊಟಿಯಾನ್​ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇದರಿಂದಾಗಿ, ಇಂಡಿಯಾ ಎ ತಂಡ 76 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿತ್ತು.

ತದನಂತರ, ಶಿವಂ ದುಬೆ (14) ಹಾಗೂ ಕುಲದೀಪ್ ಯಾದವ್ (14) ಅವರೊಂದಿಗೆ ಅಲ್ಪ ಜೊತೆಯಾಟವಾಡಿದ ಕೆ.ಎಲ್.ರಾಹುಲ್ (57) ಅರ್ಧಶತಕ ದಾಖಲಿಸಿದರು. ಚಹಾ ವಿರಾಮದ ಬಳಿಕ ದಾಳಿಗಿಳಿದ ಮುಕೇಶ್ ಕುಮಾರ್, ಕೆ.ಎಲ್.ರಾಹುಲ್ ವಿಕೆಟ್ ಪಡೆಯುವ ಮೂಲಕ ಇಂಡಿಯಾ ಬಿ ಮತ್ತೊಮ್ಮೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಕೆಳ ಕ್ರಮಾಂಕದಲ್ಲಿ ಪ್ರತಿರೋಧವೊಡ್ಡಿದ ಆಕಾಶ್ ದೀಪ್ 43 ರನ್ ಗಳಿಸಿದರಾದರೂ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

ಮುಶೀರ್ ಖಾನ್ 'ಪಂದ್ಯ ಪುರುಷ': ಅಂತಿಮವಾಗಿ ಇಂಡಿಯಾ ಎ ತಂಡ 53 ಓವರ್‌ಗಳಲ್ಲಿ 198 ರನ್‌ಗಳಿಗೆ ಸರ್ವಪತನ ಕಂಡಿತು. ಇಂಡಿಯಾ ಬಿ ಪರ ಯಶ್​ ದಯಾಳ್​ 3, ಮುಕೇಶ್​ ಕುಮಾರ್​ ಹಾಗೂ ನವದೀಪ್​ ಸೈನಿ ತಲಾ 2 ವಿಕೆಟ್​ ಕಬಳಿಸಿದರು. ಈ ಗೆಲುವಿನೊಂದಿಗೆ‌ ಇಂಡಿಯಾ ಬಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ ಶತಕ ದಾಖಲಿಸಿದ್ದ ಮುಶೀರ್ ಖಾನ್ ಪಂದ್ಯ ಪುರುಷ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್ ವಿವರ:

ಇಂಡಿಯಾ ಬಿ ದ್ವಿತೀಯ ಇನ್ನಿಂಗ್ಸ್ - 184/10 (42 ಓವರ್​​)

ರಿಷಭ್ ಪಂತ್ 61, ಸರ್ಫರಾಜ್ ಖಾನ್ 46 ರನ್​

ಆಕಾಶ್ ದೀಪ್ 56/5, ಖಲೀಲ್ ಅಹಮದ್ 69/3 ವಿಕೆಟ್​​

ಇಂಡಿಯಾ ಎ ದ್ವಿತೀಯ ಇನ್ನಿಂಗ್ಸ್- 198/10 (53 ಓವರ್)

ಕೆ.ಎಲ್.ರಾಹುಲ್ 57, ಆಕಾಶ್ ದೀಪ್ 43 ರನ್​

ಯಶ್ ದಯಾಳ್ 50/3, ನವದೀಪ್ ಸೈನಿ 41/2, ಮುಕೇಶ್ ಕುಮಾರ್ 50/2 ವಿಕೆಟ್

ಇದನ್ನೂ ಓದಿ:ಜಾವೆಲಿನ್​ನಲ್ಲಿ ಬೆಳ್ಳಿ ಗೆದ್ದಿದ್ದ ಬೆಂಗಳೂರು ಐಟಿ ಇನ್ಸ್​ಪೆಕ್ಟರ್​ಗೆ ಒಲಿದ ಚಿನ್ನ;​ ಪ್ಯಾರಾಲಿಂಪಿಕ್​​ನಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ - Paris Paralympics

ABOUT THE AUTHOR

...view details