ಬೆಂಗಳೂರು:ಇಲ್ಲಿನಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಹಾಗೂ ಭಾರತದ ವನಿತೆಯರ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸ್ಮೃತಿ ಮಂಧಾನ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಇಬ್ಬರೂ ಶತಕ ದಾಖಲಿಸಿ ಮಿಂಚಿದ್ದಾರೆ. ಸ್ಮೃತಿ ಮಂಧಾನ ಮೊದಲ ಪಂದ್ಯದಲ್ಲೂ ಸ್ಫೋಟಕ ಶತಕ ಸಿಡಿಸಿದ್ದರು.
ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಸ್ಮೃತಿ, 103 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿ ಏಕದಿನ ಅಂತಾರಾಷ್ಟ್ರೀಯ ಮಾದರಿಯಲ್ಲಿ 7ನೇ ಶತಕದ ದಾಖಲೆ ಬರೆದರು. ಅಷ್ಟೇ ಅಲ್ಲ ಈ ಶತಕದಿಂದ ಭಾರತದ ಪರ ಮಹಿಳಾ ಏಕದಿನ ಅಂತಾರಾಷ್ಟ್ರೀಯ ಮಾದರಿಯಲ್ಲಿ ಗರಿಷ್ಠ ಶತಕ ದಾಖಲಿಸಿರುವ ಮಿಥಾಲಿ ರಾಜ್ ಅವರ ದಾಖಲೆ ಸರಿಗಟ್ಟಿದರು.
ಮೊದಲ ಏಕದಿನ ಪಂದ್ಯದಲ್ಲಿ 117 ರನ್ ಗಳಿಸಿದ್ದ ಸ್ಮೃತಿ, ದ್ವಿತೀಯ ಪಂದ್ಯದಲ್ಲಿಯೂ ಶತಕ ದಾಖಲಿಸುವ ಮೂಲಕ ಸತತ ಎರಡು ಶತಕ ದಾಖಲಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಖ್ಯಾತಿಗೂ ಭಾಜನರಾದರು. ಅಲ್ಲದೇ ಏಕದಿನ ಮಾದರಿಯಲ್ಲಿ ವೈಯಕ್ತಿಕ ಗರಿಷ್ಠ ಮೊತ್ತದ (136) ದಾಖಲೆ ಬರೆದಿದ್ದಾರೆ. 2018ರಲ್ಲಿ ದ.ಆಫ್ರಿಕಾ ವಿರುದ್ಧ ಕಿಂಬರ್ಲಿಯಲ್ಲಿ ನಡೆದ ಪಂದ್ಯದಲ್ಲಿ ದಾಖಲಿಸಿದ್ದ 135 ರನ್ ಏಕದಿನ ಮಾದರಿಯಲ್ಲಿ ಸ್ಮೃತಿ ಮಂಧಾನ ಅವರ ಇದುವರೆಗಿನ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಇಂದಿನ ಪಂದ್ಯದಲ್ಲಿ 120 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 18 ಬೌಂಡರಿಗಳ ಸಹಿತ 136 ರನ್ ಗಳಿಸಿ ಸ್ಮೃತಿ ವಿಕೆಟ್ ಒಪ್ಪಿಸಿದರು.
ಸ್ಮೃತಿಗೆ ಉತ್ತಮ ಸಾಥ್ ನೀಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್ 87 ಎಸೆತಗಳಲ್ಲಿ ನೂರರ ಗಡಿ ತಲುಪುವ ಮೂಲಕ ತಮ್ಮ ವೃತ್ತಿಜೀವನದ ಆರನೇ ಏಕದಿನ ಶತಕ ದಾಖಲೆ ಬರೆದರು. ಹರ್ಮನ್ 3 ಸಿಕ್ಸರ್ ಹಾಗೂ 9 ಬೌಂಡರಿಗಳ ಸಹಿತ 103 ರನ್ ಗಳಿಸಿ ಅಜೇಯರಾಗುಳಿದರು. ಸ್ಮೃತಿ-ಹರ್ಮನ್ ಜೊತೆಯಾಟದ ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 325 ರನ್ ಕಲೆ ಹಾಕಿತು. ಇದು ಏಕದಿನ ಮಾದರಿಯಲ್ಲಿ ತವರಿನಲ್ಲಿ ಭಾರತ ಕಲೆಹಾಕಿದ ಗರಿಷ್ಠ ಮೊತ್ತ ಎಂಬುದು ವಿಶೇಷ.
ಇದನ್ನೂ ಓದಿ:ಆಪ್ಘನ್ ಸವಾಲು ಎದುರಿಸಲು ನೆಟ್ಸ್ನಲ್ಲಿ ಬೆವರಿಳಿಸಿದ ಭಾರತ ತಂಡ: ವಿರಾಟ್ ಮೇಲೆ ನಿರೀಕ್ಷೆಯ ಭಾರ - Indian Team practicing session