Sanju Samson Record: ಶುಕ್ರವಾರ ಡರ್ಬನ್ನ ಕಿಂಗ್ಸ್‌ಮೀಡ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ತೋರಿದ್ದಾರೆ. ತಮ್ಮ ಸೂಪರ್ ಫಾರ್ಮ್ ಅನ್ನು ಮುಂದುವರೆಸಿರುವ ಸಂಜು ಭರ್ಜರಿ ಶತಕ ಸಿಡಿಸಿದ್ದಾರೆ.
ಆರಂಭಿಕರಾಗಿ ಕ್ರೀಸ್ಗಿಳಿದ ಸಂಜು ಶತಕದೊಂದಿಗೆ 107 ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ತಮ್ಮ ಇನ್ನಿಂಗ್ಸ್ನಲ್ಲಿ ರನ್ ಮಳೆ ಸುರಿಸಿದ ಸಂಜು 7 ಬೌಂಡರಿ ಮತ್ತು 10 ಸಿಕ್ಸರ್ ಸಿಡಿಸಿ ಹರಿಣ ಬೌಲಿಂಗ್ ಪಡೆಯನ್ನು ಧ್ವಂಸ ಮಾಡಿದರು. ಇದರೊಂದಿಗೆ ರೋಹಿತ್ ಶಮಾ, ಸೂರ್ಯಕುಮಾರ್ ಯಾದವ್ ಮತ್ತು ಯುವರಾಜ್ ಸಿಂಗ್ ಅವರ ದಾಖಲೆಗಳನ್ನು ಮುರಿದು ತಮ್ಮ ಹೆಸರಿಗೆ ಹೊಸ ದಾಖಲೆಗಳನ್ನು ಸೇರಿಸಿಕೊಂಡಿದ್ದಾರೆ.
ಒಂದು ಶತಕ ಹಲವು ದಾಖಲೆ ಉಡೀಸ್:ಅಭಿಷೇಕ್ ಶರ್ಮಾರೊಂದಿಗೆ ಆರಂಭಿಕರಾಗಿ ಕ್ರೀಸ್ಗಿಳಿದ ಸಂಜು 47 ಎಸೆತಗಳಲ್ಲಿ ಶತಕ ಪೂರೈಸಿದರು. ಇದರೊಂದಿಗೆ ಹರಿಣಗಳ ಪಡೆ ವಿರುದ್ಧ ವೇಗದ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ದಾಖಲೆ ಬರೆದರು. ಅಲ್ಲದೆ, ಭಾರತದ ಪರ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 2017ರಲ್ಲಿ ಇಂದೋರ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ 118 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದರಲ್ಲಿ 10 ಸಿಕ್ಸರ್‌ಗಳನ್ನು ಸಿಡಿಸಿದ್ದರು.
ಹಿಟ್ಮ್ಯಾನ್ ದಾಖಲೆ ಮುರಿದ ಸಂಜು:ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಹೆಚ್ಚು ಸ್ಕೋರ್ ಗಳಿಸಿದ ಬ್ಯಾಟರ್ ಆಗಿ ರೋಹಿತ್ ಶರ್ಮಾ ಅವರ ದಾಖಲೆ ಮುರಿದರು. ಇದಕ್ಕೂ ಮುನ್ನ 2015ರಲ್ಲಿ ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ 106 ರನ್‌ಗಳ ಇನಿಂಗ್ಸ್ ಆಡಿದ್ದರು.